

ನವದೆಹಲಿ: ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ನೂತನ ರಾಷ್ಟ್ರೀಯ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ.
ಪಕ್ಷದ ಡಿಜಿಟಲ್ ಕಾರ್ಯಾಚರಣೆಗಳಲ್ಲಿ ದೀರ್ಘಕಾಲದಿಂದ ಪ್ರಮುಖ ಪಾತ್ರ ವಹಿಸುತ್ತಿದ್ದ ಅಮಿತ್ ಮಾಳವಿಯಾ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ಹೊಸ ತಂಡದಲ್ಲಿ ಸ್ಥಾನ ಪಡೆದಿಲ್ಲ. ಅವರ ಬದಲಿಗೆ ಛತ್ತೀಸ್‌ಗಢದ ದೀಪಕ್ ಮಸ್ಕಿ ಅವರನ್ನು ಬಿಜೆಪಿಯ ಐಟಿ (IT) ವಿಭಾಗದ ರಾಷ್ಟ್ರೀಯ ಸಂಚಾಲಕರನ್ನಾಗಿ ನೇಮಿಸಲಾಗಿದೆ.
ಹೊಸ ರಾಷ್ಟ್ರೀಯ ತಂಡದ ಘೋಷಣೆಯ ನಂತರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಮಾಳವಿಯಾ, ಮಸ್ಕಿ ಹಾಗೂ ನೂತನವಾಗಿ ನೇಮಕಗೊಂಡ ಎಲ್ಲಾ ಬಿಜೆಪಿ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪಕ್ಷ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಹಾಗೂ ಸಂದೇಶ, ಸಂಘಟನೆಯನ್ನು ದೇಶದ ಮೂಲೆಮೂಲೆಗೂ ತಲುಪಿಸಲು ಸಜ್ಜಾಗುತ್ತಿರುವ ನಿರ್ಣಾಯಕ ಹಂತದಲ್ಲಿ ಈ ನೇಮಕ ನಡೆದಿದೆ ಎಂದಿದ್ದಾರೆ.
ದೀಪಕ್ ಮಸ್ಕಿ ನೇತೃತ್ವದಲ್ಲಿ ಬಿಜೆಪಿಯ ಡಿಜಿಟಲ್ ಸಂವಹನವು ಹೊಸ ಮೈಲಿಗಲ್ಲುಗಳನ್ನು ಸಾಧಿಸಲಿದೆ ಮತ್ತು ದೃಢತೆ, ಸೃಜನಶೀಲತೆ ಹಾಗೂ ಸ್ಪಷ್ಟತೆಯೊಂದಿಗೆ ಭಾರತದ ಸಾರ್ವಜನಿಕ ಚರ್ಚೆಯನ್ನು ರೂಪಿಸುವುದನ್ನು ಮುಂದುವರಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ಅವರು ಬರೆದುಕೊಂಡಿದ್ದಾರೆ.