

ನವದೆಹಲಿ: ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಖಾಸಗಿ ಅಂಗಗಳ ಫೋಟೋ ತೆಗೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ CISFನ ASI ಶ್ರೇಣಿಯ ಅಧಿಕಾರಿಯೊಬ್ಬರನ್ನು ಸಹ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿರುವ ಘಟನೆ ವರದಿಯಾಗಿದೆ.
ದೆಹಲಿಯಲ್ಲಿ ಭಾನುವಾರ ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ನಡೆದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೆಟ್ರೋ ರೈಲಿನೊಳಗೆ ಪ್ರಯಾಣಿಕರೊಂದಿಗೆ ವಾಗ್ವಾದ ಹಾಗೂ ಘರ್ಷಣೆ ನಡೆದಿದೆ ಎನ್ನಲಾಗಿದೆ.
ಪ್ರಸ್ತುತ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಮೆಟ್ರೋ ಬೋಗಿಯೊಳಗೆ ಅಧಿಕಾರಿಯನ್ನು ಪ್ರಶ್ನಿಸುತ್ತಿರುವುದು ಕಾಣಿಸುತ್ತದೆ. ಅಧಿಕಾರಿಯ ಮೊಬೈಲ್ ನಲ್ಲಿ ಆಕೆಯ ದೇಹದ ಅಂಗಗಳ ಫೋಟೋ ತೆಗೆದಿರುವುದು ಬಯಲಾಗಿದೆ. ಆದರೆ ಇದನ್ನು ಪ್ರಶ್ನಿಸಿದಾಗ ಅಧಿಕಾರಿ ಇದನ್ನು ನಿರಾಕರಿಸಿದ್ದು, ಸಹ ಪ್ರಯಾಣಿಕರು ಬಲವಂತವಾಗಿ ಫೋನ್ ಗ್ಯಾಲರಿ ತೆಗೆಯಲು ಯತ್ನಿಸಿದ್ದಾರೆ. ಈ ವೇಳೆ ಸಂಘರ್ಷ ಸಂಭವಿಸಿದೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹಿರಿಯ CISF ಅಧಿಕಾರಿಯೊಬ್ಬರು, ವಿಚಾರಣೆ ಪೂರ್ಣಗೊಳ್ಳುವವರೆಗೆ ಆರೋಪಿತ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಫೋನ್‌ನಲ್ಲಿದ್ದ ಫೋಟೋಗಳನ್ನು ಅಳಿಸುವಂತೆ ಪ್ರಯಾಣಿಕರು ಅಧಿಕಾರಿಗೆ ಒತ್ತಾಯಿಸಿದ್ದಾರೆ. ಬಳಿಕ ಅಧಿಕಾರಿ ಮೆಟ್ರೋ ಬೋಗಿಯಿಂದ ಹೊರಹೋಗಲು ಮುಂದಾದಾಗ ಕೆಲ ಪ್ರಯಾಣಿಕರು ಅವರನ್ನು ತಡೆದಿದ್ದಾರೆ. ಇದರಿಂದ ವಾಗ್ವಾದ ತೀವ್ರಗೊಂಡು ನೂಕಾಟ-ತಳ್ಳಾಟ ಹಾಗೂ ಸಣ್ಣ ಮಟ್ಟಿನ ಘರ್ಷಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಇದೀಗ ಘರ್ಷಣೆಗೆ ಕಾರಣವಾದ ಸಂಪೂರ್ಣ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಇದುವರೆಗೆ ಯಾರೂ ಅಧಿಕೃತ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.