

ನವದೆಹಲಿ: ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಆ್ಯಂಡ್ ರಿಸರ್ಚ್ (NALSAR) ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಾಜರಾಗುವ ಆಹ್ವಾನವನ್ನು ತಾನು ಸ್ವೀಕರಿಸಿಯೇ ಇಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಸ್ಪಷ್ಟಪಡಿಸಿದ್ದಾರೆ.
NALSAR ಘಟಿಕೋತ್ಸವಕ್ಕೆ ಸಿಜೆಐ ಸೂರ್ಯಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವ ವಿಚಾರಕ್ಕೆ ವಿದ್ಯಾರ್ಥಿಗಳ ಒಂದು ವರ್ಗ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿವಾದ ಭುಗಿಲೆದ್ದಿತ್ತು.
ಈ ವಿವಾದಕ್ಕೆ ಮಧ್ಯ ಪ್ರವೇಶಿಸಿದ್ದ ಭಾರತೀಯ ಬಾರ್ ಕೌನ್ಸಿಲ್ (BCI), ಘಟಿಕೋತ್ಸವದಲ್ಲಿ ಪದವಿ ಪಡೆಯಲಿರುವ ವಿದ್ಯಾರ್ಥಿಗಳನ್ನು ‘ಬ್ಲ್ಯಾಕ್‌ಬಾಲ್’ ಮಾಡುವಂತೆ ಆದೇಶಿಸಿತ್ತು. ಬಳಿಕ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ಆದೇಶವನ್ನು ಹಿಂಪಡೆದು ವಿಷಾದ ವ್ಯಕ್ತಪಡಿಸಿತ್ತು.
ಜೋಧ್‌ಪುರದಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಉದ್ದೇಶಿಸಿ ಮಾತನಾಡಿದ ಕೆಲವೇ ಗಂಟೆಗಳ ಬಳಿಕ ಪ್ರತಿಕ್ರಿಯಿಸಿದ ಸಿಜೆಐ ಸೂರ್ಯಕಾಂತ್, “ನಾನು NALSAR ನೀಡಿದ್ದ ಆಹ್ವಾನಕ್ಕೆ ಎಂದಿಗೂ ಒಪ್ಪಿಗೆ ನೀಡಿಲ್ಲ. ಹಾಗಿರುವಾಗ ನಾನು ಘಟಿಕೋತ್ಸವಕ್ಕೆ ಹಾಜರಾಗುವ ಪ್ರಶ್ನೆಯೇ ಇಲ್ಲ” ಎಂದು ತಿಳಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ NALSAR ಆಡಳಿತವು, ಸಂಪ್ರದಾಯದಂತೆ ಸಿಜೆಐ ಸೂರ್ಯಕಾಂತ್ ಅವರನ್ನು ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದನ್ನು ದೃಢಪಡಿಸಿತ್ತು. ಈ ಕಾರ್ಯಕ್ರಮ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿತ್ತು.
400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಿಜೆಐಗೆ ವಿರೋಧ
ಸುಮಾರು 1,400 ವಿದ್ಯಾರ್ಥಿಗಳನ್ನು ಹೊಂದಿರುವ NALSARನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಜೆಐ ಸೂರ್ಯಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಜುಲೈ 20ರಂದು ವಿದ್ಯಾರ್ಥಿಗಳು ಸಂಸತ್ ಭವನದತ್ತ ನಡೆಸಿದ ಮೆರವಣಿಗೆ ಹಾಗೂ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ನಡೆಸಿದ್ದಾರೆ ಎನ್ನಲಾದ ಅತಿರೇಕದ ಕ್ರಮಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಸಿಜೆಐ ನೇತೃತ್ವದ ಪೀಠ ನೀಡಿದ್ದ ಕೆಲವು ಹೇಳಿಕೆಗಳನ್ನು ವಿದ್ಯಾರ್ಥಿಗಳು ಆಕ್ಷೇಪಿಸಿದ್ದರು.
ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸರು ಅತಿರೇಕದ ಬಲಪ್ರಯೋಗ ನಡೆಸಿದ್ದಾರೆ, ಪೆಲೆಟ್ ಗನ್‌ಗಳನ್ನು ಬಳಸಿದ್ದಾರೆ ಹಾಗೂ ವಿದ್ಯಾರ್ಥಿಗಳ ಪ್ರೊಫೈಲಿಂಗ್‌ಗಾಗಿ ಮುಖ ಗುರುತಿಸುವ ತಂತ್ರಜ್ಞಾನ ಬಳಸಲಾಗಿದೆ ಎಂಬ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಹಲವು ಅರ್ಜಿಗಳು ಸಿಜೆಐ ನೇತೃತ್ವದ ಪೀಠದ ಮುಂದೆ ವಿಚಾರಣೆಯಲ್ಲಿವೆ.
ಇದೇ ವೇಳೆ, ಪ್ರತಿಭಟನೆಯಲ್ಲಿ ನುಸುಳಿದ ‘ಕ್ರಿಮಿನಲ್ ಅಂಶಗಳು’ ವ್ಯಾಪಕ ಹಿಂಸಾಚಾರ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದು, ಪ್ರಧಾನಿ ಸೇರಿದಂತೆ ಸಾಂವಿಧಾನಿಕ ಹುದ್ದೆಯಲ್ಲಿರುವವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ, ಗಾಯಗೊಂಡ ಪೊಲೀಸ್ ಸಿಬ್ಬಂದಿಯ ಸಂಬಂಧಿಕರು ಸಲ್ಲಿಸಿರುವ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ.
ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವೇನು?
ಜುಲೈ 22ರಂದು ವಕೀಲರೊಬ್ಬರು ಯಾವುದೇ ಸರಿಯಾದ ಅರ್ಜಿ ಸಲ್ಲಿಸದೆ, ಪ್ರತಿಭಟನಾಕಾರರ ವಿರುದ್ಧ ಪೊಲೀಸರು ನಡೆಸಿದ ಅತಿರೇಕದ ಕ್ರಮಗಳ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ (suo motu) ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದರು. ತಮ್ಮ ಬಳಿ ಘಟನೆಯ ವಿಡಿಯೋ ದೃಶ್ಯಗಳಿವೆ ಎಂದು ಅವರು ಹೇಳಿದ್ದರು.
ಆದರೆ ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು, ಆರೋಪಗಳನ್ನು ಸ್ಪಷ್ಟವಾಗಿ ವಿವರಿಸುವಂತೆ ಸೂಕ್ತ ಅರ್ಜಿ ಸಲ್ಲಿಸುವಂತೆ ವಕೀಲರಿಗೆ ಸೂಚಿಸಿತ್ತು.
ವಕೀಲರು ಯಾವುದೇ ದಾಖಲೆ ಸಲ್ಲಿಸದೆ ವಿಡಿಯೋಗಳನ್ನು ನ್ಯಾಯಾಲಯವೇ ವೀಕ್ಷಿಸಬೇಕು ಎಂದು ಒತ್ತಾಯಿಸಿದಾಗ, ಈಗಾಗಲೇ ಹಲವು ಪ್ರಕರಣಗಳ ವಿಚಾರಣೆಯ ಒತ್ತಡದಲ್ಲಿರುವ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಬಾರದು ಎಂದು ಸಿಜೆಐ ಸೂಚಿಸಿದ್ದರು. ಅಲ್ಲದೆ, ತಮ್ಮ ಆರೋಪಗಳನ್ನು ಒಳಗೊಂಡಂತೆ ಸರಿಯಾದ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದರು.
ನಂತರ ಇದೇ ರೀತಿಯ ಆರೋಪಗಳನ್ನು ಒಳಗೊಂಡ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಸಿಜೆಐ ನೇತೃತ್ವದ ಪೀಠ ಅವುಗಳನ್ನು ವಿಚಾರಣೆಗೆ ಸ್ವೀಕರಿಸಿದೆ. ವಿದ್ಯಾರ್ಥಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿರುವ ನ್ಯಾಯಾಲಯ, ಘಟನೆಗೆ ಸಂಬಂಧಿಸಿದ ಎಲ್ಲಾ ವಿಡಿಯೋ ಹಾಗೂ ಸಿಸಿಟಿವಿ ದೃಶ್ಯಗಳನ್ನು ಸಂರಕ್ಷಿಸುವಂತೆಯೂ ಆದೇಶಿಸಿದೆ.
ಇದರ ಜೊತೆಗೆ ಪ್ರತಿಭಟನೆಗಳ ವೇಳೆ ಪೊಲೀಸ್ ಕ್ರಮಗಳ ಕುರಿತು ಸ್ವತಂತ್ರ ತನಿಖೆ ನಡೆಸುವ ಸಾಧ್ಯತೆ ಮತ್ತು ಹಿಂಸಾತ್ಮಕ ಸ್ವರೂಪ ಪಡೆಯುವ ಪ್ರತಿಭಟನೆಗಳನ್ನು ನಿಯಂತ್ರಿಸಲು ಪೊಲೀಸರು ಅನುಸರಿಸಬೇಕಾದ ದೇಶವ್ಯಾಪಿ ಮಾರ್ಗಸೂಚಿಗಳನ್ನು ರೂಪಿಸಲು ಆಯೋಗ ರಚಿಸುವ ಕುರಿತು ಸಲಹೆಗಳನ್ನೂ ನ್ಯಾಯಾಲಯ ಕೋರಿದೆ.