ಲೋಕಸಭೆ ಸದಸ್ಯ ಬಲ ಯಥಾಸ್ಥಿತಿ ಕಾಯ್ದುಕೊಳ್ಳಲು ಕಾಂಗ್ರೆಸ್ ಒತ್ತಾಯ; 2029ರಿಂದ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗೆ ಆಗ್ರಹ

ದೇಶದಲ್ಲಿ ಯುವಸಮೂಹ ವಿಶೇಷವಾಗಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು, ರಾಮಮಂದಿರಕ್ಕೆ ನೀಡಲಾಗಿರುವ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಇ20 ಪೆಟ್ರೋಲ್ ವಿಚಾರಗಳ ಕುರಿತು ದೇಶವ್ಯಾಪಿ ಅಭಿಯಾನ ನಡೆಸಲು ಪಕ್ಷ ನಿರ್ಧರಿಸಿದೆ.
Congress leaders Sonia Gandhi, Mallikarjun Kharge, Rahul Gandhi and K C Venugopal attend the CWC meeting at Indira Bhawan on Wednesday.
ಇಂದಿರಾ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಭಾಗವಹಿಸಿದರು.
Updated on: 

ನವದೆಹಲಿ: 2029ರ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೊಳಿಸುವುದರ ಜೊತೆಗೆ, ಪ್ರಸ್ತುತ ಲೋಕಸಭೆಯ ಸದಸ್ಯ ಬಲವನ್ನು ಮುಂದಿನ 25 ವರ್ಷಗಳ ಕಾಲ ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳುವಂತೆ ಸಂವಿಧಾನಾತ್ಮಕವಾಗಿ ಸ್ಥಗಿತಗೊಳಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ದೇಶದಲ್ಲಿ ಯುವಸಮೂಹ ವಿಶೇಷವಾಗಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು, ರಾಮಮಂದಿರಕ್ಕೆ ನೀಡಲಾಗಿರುವ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಇ20 ಪೆಟ್ರೋಲ್ ವಿಚಾರಗಳ ಕುರಿತು ದೇಶವ್ಯಾಪಿ ಅಭಿಯಾನ ನಡೆಸಲು ಪಕ್ಷ ನಿರ್ಧರಿಸಿದೆ.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ನಾಲ್ಕು ಗಂಟೆಗಳ ಕಾಲದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಈ ನಿಲುವು ಕೈಗೊಳ್ಳಲಾಯಿತು. ದೆಹಲಿಯ ಇಂದಿರಾ ಭವನದಲ್ಲಿ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ. ವೇಣುಗೋಪಾಲ್ ಮತ್ತು ಜೈರಾಮ್ ರಮೇಶ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ಪಕ್ಷದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ 1937ರ ತನ್ನ ಐತಿಹಾಸಿಕ ನಿಲುವಿಗೆ ಬದ್ಧವಾಗಿರಲು ಕಾಂಗ್ರೆಸ್ ನಿರ್ಧರಿಸಿದೆ.

ಸಭೆಯ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್, ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಮುಂದಿನ 25 ವರ್ಷಗಳ ಕಾಲ ಲೋಕಸಭೆಯ ಪ್ರಸ್ತುತ 543 ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕು ಎಂಬುದು ಕಾಂಗ್ರೆಸ್‌ನ ನಿಲುವಾಗಿದೆ ಎಂದು ಹೇಳಿದರು.

ಇದೇ ಸಂಖ್ಯೆಯ ಸ್ಥಾನಗಳ ಆಧಾರದ ಮೇಲೆ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ರಮೇಶ್ ಹೇಳಿದರು.

ರಾಮಮಂದಿರಕ್ಕೆ ನೀಡಲಾದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರವನ್ನು ಖಂಡಿಸಿ ಕಾಂಗ್ರೆಸ್ ದೇಶವ್ಯಾಪಿ ಪ್ರತಿಭಟನೆಗಳನ್ನು ನಡೆಸಲಿದೆ. ರಾಮಮಂದಿರದ ದೇಣಿಗೆ ಕಳ್ಳತನ ಈಗ ಕೇವಲ ರಾಮಮಂದಿರದ ವಿಚಾರವಾಗಿ ಉಳಿದಿಲ್ಲ. ಇದು ಜನರ ಭಾವನೆಗಳ ವಿಚಾರವೂ ಆಗಿದೆ ಎಂದು ಪಕ್ಷದ ನಾಯಕ ಕೆ.ಸಿ. ವೇಣುಗೋಪಾಲ್ ಹೇಳಿದರು.

Congress leaders Sonia Gandhi, Mallikarjun Kharge, Rahul Gandhi and K C Venugopal attend the CWC meeting at Indira Bhawan on Wednesday.
ಪ್ರಶ್ನೆಪತ್ರಿಕೆ ಸೋರಿಕೆ, 'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

ಶಿಕ್ಷಣ ಸುಧಾರಣೆಗಳ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಗ್ರ ಹಾಗೂ ಕಾಲಮಿತಿಯ ‘ಶಿಕ್ಷಣದಿಂದ ಉದ್ಯೋಗದವರೆಗೆ ಮಾರ್ಗಸೂಚಿ’ (Education-to-Employment Roadmap) ರೂಪಿಸುವಂತೆ ಕರೆ ನೀಡಿದರು. ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯವಿರುವ ಸುಧಾರಣೆಗಳ ಕುರಿತು ಒಂದು ತಿಂಗಳೊಳಗೆ ರಾಜ್ಯವಾರು ವರದಿಗಳನ್ನು ಸಿದ್ಧಪಡಿಸುವಂತೆ ಕಾಂಗ್ರೆಸ್ ಆಡಳಿತದ ಮುಖ್ಯಮಂತ್ರಿಗಳಿಗೆ ಸಿಡಬ್ಲ್ಯುಸಿ ಸೂಚಿಸಿದೆ.

ಸಿಡಬ್ಲ್ಯುಸಿ ಅಂಗೀಕರಿಸಿದ ನಿರ್ಣಯದಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆಗಳು ಸಾಂಕ್ರಾಮಿಕ ಪ್ರಮಾಣ ತಲುಪಿವೆ ಎಂದು ಕಾಂಗ್ರೆಸ್ ಆರೋಪಿಸಿದೆ. 2014ರಿಂದ ಕನಿಷ್ಠ 152 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ ಎಂದು ಹೇಳಿರುವ ಪಕ್ಷ, ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದೆ.

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಕೈಗೊಂಡ ಕ್ರಮವನ್ನೂ ಕಾಂಗ್ರೆಸ್ ಖಂಡಿಸಿದೆ.

ಇದಲ್ಲದೆ, ಇ20 ಪೆಟ್ರೋಲ್ ಜಾರಿ ಬಗ್ಗೆಯೂ ಸಭೆಯಲ್ಲಿ ಕಳವಳ ವ್ಯಕ್ತವಾಯಿತು. ಇಂಧನದಲ್ಲಿ ಕಲಬೆರಕೆ ಉಂಟಾಗುವ ಸಾಧ್ಯತೆ, ಎಥನಾಲ್ ಉತ್ಪಾದನೆಗಾಗಿ ಕಬ್ಬು ಮತ್ತು ಮೆಕ್ಕೆಜೋಳವನ್ನು ಬಳಸುವುದರಿಂದ ಪರಿಸರದ ಮೇಲಾಗುವ ಪರಿಣಾಮ ಸೇರಿದಂತೆ ಹಲವು ಪ್ರಶ್ನೆಗಳನ್ನು ಸಭೆಯಲ್ಲಿ ಎತ್ತಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com