'ಬಲಿಷ್ಠ ದಕ್ಷಿಣ ಭಾರತವೇ ಬಲಿಷ್ಠ ಭಾರತದ ಆಧಾರ': ಕರ್ನಾಟಕದ ಜಲ, ಆರ್ಥಿಕ- ರಾಜಕೀಯ ಕಾಳಜಿ ವಹಿಸಿ: ಅಮಿತ್ ಶಾ ಮುಂದೆ ಪ್ರಸ್ತಾಪಿಸಿದ ಸಿಎಂ ಡಿ.ಕೆ. ಶಿವಕುಮಾರ್-Video

ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ. ಸಭೆಗೆ ಇಂದು ತೆಲಂಗಾಣ ಮತ್ತು ಪುದುಚೇರಿ ಮುಖ್ಯಮಂತ್ರಿಗಳು ಗೈರಾಗಿದ್ದರು.
D K Shivakumar and C Joseph Vijay
ಡಿ ಕೆ ಶಿವಕುಮಾರ್, ತಮಿಳು ನಾಡು ಸಿಎಂ ಜೋಸೆಫ್ ವಿಜಯ್
Updated on

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಇಂದು ಚೆನ್ನೈಯ ಮಹಾಬಲಿಪುರಂನಲ್ಲಿ ದಕ್ಷಿಣ ರಾಜ್ಯಗಳ 31ನೇ ದಕ್ಷಿಣ ವಲಯ ಮಂಡಳಿ ಸಭೆ ಏರ್ಪಟ್ಟಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಅಕ್ಕಪಕ್ಕದಲ್ಲಿ ಕುಳಿತು ಗಂಭೀರವಾಗಿ ಚರ್ಚಿಸುತ್ತಿರುವುದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗುತ್ತಿದೆ. ಸಭೆಯಲ್ಲಿ ಅಂತಾರಾಜ್ಯ ಜಲ ಹಂಚಿಕೆ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ಸಿಎಂಒ ಮೂಲಗಳು ತಿಳಿಸಿವೆ.

ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ. ಸಭೆಗೆ ಇಂದು ತೆಲಂಗಾಣ ಮತ್ತು ಪುದುಚೇರಿ ಮುಖ್ಯಮಂತ್ರಿಗಳು ಗೈರಾಗಿದ್ದರು.

ದಕ್ಷಿಣ ರಾಜ್ಯಗಳಿಗೆ ಸಂಬಂಧಿಸಿದ ಹಲವು ರಾಜಕೀಯ ಹಾಗೂ ಅಂತಾರಾಜ್ಯ ವಿಚಾರಗಳು ಚರ್ಚೆಯಲ್ಲಿರುವ ಸಂದರ್ಭದಲ್ಲಿ ಈ ಮಹತ್ವದ ಸಭೆ ನಡೆದಿದೆ.

ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಕರ್ನಾಟಕದ ಜಲ, ಆರ್ಥಿಕ ಮತ್ತು ರಾಜಕೀಯ ಕಾಳಜಿ ವಿಷಯ ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸಭೆಯಲ್ಲಿ ಕರ್ನಾಟಕದ ಪ್ರಮುಖ ಕಾಳಜಿಗಳು ಹಾಗೂ ಆದ್ಯತೆಗಳನ್ನು ಪ್ರಸ್ತಾಪಿಸಿದರು.

ಅಂತಾರಾಜ್ಯ ಜಲ ವಿವಾದಗಳ ಕುರಿತು ಮಾತನಾಡಿದ ಶಿವಕುಮಾರ್, ನೀರು ಹಂಚಿಕೆಯ ಬದಲು ಸಮಾನತೆ, ಪಾರದರ್ಶಕತೆ ಮತ್ತು ಪರಸ್ಪರ ಸಹಕಾರದ ಆಧಾರದ ಮೇಲೆ ಜಲ ಸಹಕಾರದತ್ತ ಸಾಗುವ ಅಗತ್ಯವಿದೆ ಎಂದು ಹೇಳಿದರು.

ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಹಾಗೂ ಪಾಲಾರ್ ನದಿ ವಿವಾದಗಳಲ್ಲಿ ಕರ್ನಾಟಕದ ಕಾಳಜಿಗಳನ್ನು ಅವರು ಸಭೆಯ ಗಮನಕ್ಕೆ ತಂದರು. ಕರ್ನಾಟಕಕ್ಕೆ ಕಾನೂನುಬದ್ಧವಾಗಿ ದೊರೆಯಬೇಕಾದ ನೀರಿನ ಪಾಲು ಹಾಗೂ ಎಲ್ಲಾ ನದಿ ಪಾತ್ರದ ರಾಜ್ಯಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

D K Shivakumar and C Joseph Vijay
ಕಾವೇರಿ ವಿವಾದ- ‘ನಮ್ಮ ಹಿತಾಸಕ್ತಿಗೆ ವಿರುದ್ಧ’: ತಮಿಳುನಾಡಿಗೆ ನೀರು ಹರಿಸುವ ಪ್ರಮಾಣ ಅರ್ಧಕ್ಕೆ ಇಳಿಸುವಂತೆ ಕರ್ನಾಟಕ CWMAಗೆ ಮನವಿ

15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕದ ವಿಭಜಿಸಬಹುದಾದ ತೆರಿಗೆ ಪಾಲು ಶೇ.3.6ಕ್ಕೆ ಇಳಿದಿರುವುದರಿಂದ ಆರು ವರ್ಷಗಳಲ್ಲಿ ರಾಜ್ಯಕ್ಕೆ ಅಂದಾಜು 65,000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಪಾಲನ್ನು ಶೇ.3.6ರಿಂದ ಮತ್ತೆ ಶೇ.4.7ಕ್ಕೆ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು.

15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ 5,495 ಕೋಟಿ ರೂ ವಿಶೇಷ ಅನುದಾನ ಹಾಗೂ 6,000 ಕೋಟಿ ರೂ ರಾಜ್ಯ-ನಿರ್ದಿಷ್ಟ ಅನುದಾನವನ್ನು ಬಿಡುಗಡೆ ಮಾಡುವಂತೆ ಅವರು ಆಗ್ರಹಿಸಿದರು. ಕರ್ನಾಟಕದ ಪ್ರಮುಖ ಯೋಜನೆಗಳಿಗೆ ಹೆಚ್ಚುವರಿ ಕೇಂದ್ರದ ನೆರವು ನೀಡಬೇಕು ಎಂದೂ ಮನವಿ ಮಾಡಿದರು.

ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ವಿಚಾರದಲ್ಲೂ ಅವರು ಕಳವಳ ವ್ಯಕ್ತಪಡಿಸಿದರು. ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯವನ್ನು ರಕ್ಷಿಸಲು ಕ್ಷೇತ್ರ ಪುನರ್ವಿಂಗಡಣೆಗೆ 1971ರ ಜನಸಂಖ್ಯಾ ಆಧಾರವನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಆರೋಗ್ಯ, ಶಿಕ್ಷಣ, ಪೌಷ್ಟಿಕತೆ, ವಸತಿ, ಕರಾವಳಿ ಸವೆತ, ವಿಪತ್ತು ನಿರ್ವಹಣೆ, ರೈತರು ಹಾಗೂ ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಿಗೆ ಹೆಚ್ಚಿನ ಬೆಂಬಲ ನೀಡಬೇಕು ಎಂದು ಡಿ ಕೆ ಶಿವಕುಮಾರ್ ಮನವಿ ಮಾಡಿದರು. ಖನಿಜ ಸಂಪತ್ತು ಹೊಂದಿರುವ ರಾಜ್ಯಗಳ ಆರ್ಥಿಕ ಹಕ್ಕುಗಳನ್ನು ರಕ್ಷಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು.

ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಮಸೂದೆ, 2026 ಅನ್ನು ಮರುಪರಿಶೀಲಿಸುವಂತೆ ಅವರು ಆಗ್ರಹಿಸಿದರು. ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ಮತ್ತಷ್ಟು ಬಲಿಷ್ಠ ಕಾನೂನುಗಳು ಹಾಗೂ ಪರಿಣಾಮಕಾರಿ ಜಾರಿ ವ್ಯವಸ್ಥೆ ಅಗತ್ಯವಿದೆ ಎಂದರು.

“ಬಲಿಷ್ಠ ದಕ್ಷಿಣ ಭಾರತವೇ ಬಲಿಷ್ಠ ಭಾರತದ ಆಧಾರ” ಎಂದು ಪುನರುಚ್ಚರಿಸಿದ ಡಿ ಕೆ ಶಿವಕುಮಾರ್, ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ದಕ್ಷಿಣ ರಾಜ್ಯಗಳಿಗೆ ಸಂಪನ್ಮೂಲ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ ಮತ್ತು ರಾಜ್ಯಗಳ ಹಕ್ಕುಗಳ ವಿಚಾರದಲ್ಲಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com