

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದು, ಅಡುಗೆ ಮನೆಯ ಬಜೆಟ್ ಮೇಲೆ ಮತ್ತೊಂದು ಹೊರೆ ಬಿದ್ದಿದೆ.
ಪೂರೈಕೆ ಕಡಿಮೆಯಾಗಿರುವುದು ಹಾಗೂ ಹೊಸ ಖಾರಿಫ್ ಬೆಳೆ ಮಾರುಕಟ್ಟೆಗೆ ಬರುವಲ್ಲಿ ವಿಳಂಬವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ಈರುಳ್ಳಿ ದರ ದಿಢೀರ್ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ.
ಮಹಾರಾಷ್ಟ್ರದ ಲಾಸಲ್‌ಗಾಂವ್ ದೇಶದ ಪ್ರಮುಖ ಈರುಳ್ಳಿ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಕಳೆದ ಕೆಲ ದಿನಗಳಲ್ಲಿ ಅಲ್ಲಿನ ಸಗಟು ದರದಲ್ಲಿ ಗಮನಾರ್ಹ ಏರಿಕೆಯಾಗಿದೆ. ಕಳೆದ ಒಂದು ವಾರದಲ್ಲೇ ಸರಾಸರಿ ಸಗಟು ದರ ಸುಮಾರು ಶೇ. 32ರಷ್ಟು ಏರಿಕೆಯಾಗಿದೆ.
ಅಖಿಲ ಭಾರತ ಮಂಡಿ ದತ್ತಾಂಶದ ಪ್ರಕಾರ, ಆಗಸ್ಟ್ 18ರಂದು ದೇಶಾದ್ಯಂತ ಈರುಳ್ಳಿಯ ಸರಾಸರಿ ಸಗಟು ಬೆಲೆ ಕ್ವಿಂಟಲ್‌ಗೆ ಸುಮಾರು 2,898 ರೂ ಗೆ ತಲುಪಿತ್ತು. ಒಂದು ವಾರದ ಹಿಂದಿನ ದರಕ್ಕೆ ಹೋಲಿಸಿದರೆ ಇದು ಸುಮಾರು ಶೇ.32ರಷ್ಟು ಏರಿಕೆಯಾಗಿದ್ದು, ಒಂದು ತಿಂಗಳಿಗೆ ಹೋಲಿಸಿದರೆ ಶೇ.43ಕ್ಕೂ ಹೆಚ್ಚು ಏರಿಕೆಯಾಗಿದೆ.
ಈರುಳ್ಳಿ ಬೆಲೆ ಏಕೆ ಏರುತ್ತಿದೆ?
ಈರುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣ ಪೂರೈಕೆಯಲ್ಲಿನ ಕೊರತೆ. ದೇಶದ ವಾರ್ಷಿಕ ಈರುಳ್ಳಿ ಉತ್ಪಾದನೆಯ ಸುಮಾರು ಶೇ.60-65ರಷ್ಟು ಪಾಲು ನೀಡುವ ರಬಿ ಬೆಳೆ ಸಾಮಾನ್ಯವಾಗಿ ಸೆಪ್ಟೆಂಬರ್‌ವರೆಗೆ ಮಾರುಕಟ್ಟೆಗೆ ಪೂರೈಕೆಯಾಗುತ್ತದೆ.
ಆದರೆ ಈ ಬಾರಿ ರಬಿ ಈರುಳ್ಳಿ ಉತ್ಪಾದನೆ ಕಡಿಮೆಯಾಗಿರುವ ಅಂದಾಜು ಇದೆ. ಮಹಾರಾಷ್ಟ್ರ ಸೇರಿದಂತೆ ಪ್ರಮುಖ ಉತ್ಪಾದನಾ ಪ್ರದೇಶಗಳಲ್ಲಿ ಅಕಾಲಿಕ ಮಳೆಯೂ ಬೆಳೆಯ ಗುಣಮಟ್ಟ ಹಾಗೂ ಲಭ್ಯತೆಯ ಮೇಲೆ ಪರಿಣಾಮ ಬೀರಿದೆ.
ಸರ್ಕಾರದಿಂದ ಖರೀದಿ ಬೆಲೆ ಹೆಚ್ಚಳ
ಬೆಲೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈರುಳ್ಳಿ ಖರೀದಿ ಬೆಲೆಯನ್ನೂ ಹೆಚ್ಚಿಸಿದೆ. ಆಗಸ್ಟ್ 18ರಂದು ಈರುಳ್ಳಿ ಖರೀದಿ ಬೆಲೆಯನ್ನು ಕೆಜಿಗೆ 26.45 ರೂಗೆ ಏರಿಸಲಾಗಿದೆ. ಈರುಳ್ಳಿ ಬಫರ್ ಸ್ಟಾಕ್ ನಿರ್ಮಿಸುವ ಮೂಲಕ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಹೆಚ್ಚಿಸಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
ಗ್ರಾಹಕರಿಗೆ ಹೊರೆ
ಸಗಟು ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ಇದೀಗ ಚಿಲ್ಲರೆ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ. ಆಂಧ್ರಪ್ರದೇಶದ ಕೆಲವು ಪ್ರದೇಶಗಳಲ್ಲಿ ಈರುಳ್ಳಿ ಬೆಲೆ ಜೂನ್‌ನಲ್ಲಿ ಕೆಜಿಗೆ ಸುಮಾರು 25 ರೂ ಇದ್ದದ್ದು ಆಗಸ್ಟ್‌ನಲ್ಲಿ 60 ರೂಗಳ ಮಟ್ಟಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ, ವಿಶೇಷವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯ ಬಗ್ಗೆ ಮಾರುಕಟ್ಟೆ ವಲಯದಲ್ಲಿ ಆತಂಕ ವ್ಯಕ್ತವಾಗಿದೆ.
ರಬಿ ಈರುಳ್ಳಿ ದಾಸ್ತಾನು ಕಡಿಮೆಯಾಗುವ ವೇಳೆಗೆ ಹೊಸ ಖಾರಿಫ್ ಬೆಳೆ ಮಾರುಕಟ್ಟೆಗೆ ಬರುವಲ್ಲಿ ವಿಳಂಬವಾದರೆ ಬೆಲೆ ಒತ್ತಡ ಹೆಚ್ಚಾಗಬಹುದು. ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳದಂತೆ ಸರ್ಕಾರ ಈರುಳ್ಳಿ ಬಫರ್ ಸ್ಟಾಕ್ ಬಳಸಿ ಮಾರುಕಟ್ಟೆ ಮಧ್ಯಪ್ರವೇಶ ಮಾಡುವ ಸಾಧ್ಯತೆಯಿದೆ. ಸದ್ಯ ದೇಶದ ಪ್ರಮುಖ ಮಂಡಿಗಳಲ್ಲಿನ ಪೂರೈಕೆ ಮತ್ತು ಬೆಲೆ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಗಮನಿಸುತ್ತಿದೆ.