

ನವದೆಹಲಿ/ಕಠ್ಮಂಡು: ಇಂದು ಬೆಳಿಗ್ಗೆ ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ನಂತರ, ಸದ್ಗುರು ಅವರ ಇಶಾ ಫೌಂಡೇಶನ್‌ಗೆ ಸೇರಿದ 77 ಯಾತ್ರಾರ್ಥಿಗಳು ಕಣ್ಮರೆಯಾಗಿದ್ದಾರೆ.
ಟಿಬೆಟ್‌ನ ಕೈಲಾಸ ಮಾನಸ ಸರೋವರದಿಂದ ಮರಳುತ್ತಿದ್ದ ಈ ತಂಡವು ವಲಸೆ ಕಚೇರಿಯಲ್ಲಿದಾಗ (immigration office ) ಈ ಘಟನೆ ಸಂಭವಿಸಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಟಿಬೆಟ್‌ನ ಗಡಿಯಲ್ಲಿರುವ ರಾಸುವಾ ಜಿಲ್ಲೆಯ ಹಳ್ಳಿಗಳ ಮೂಲಕ ನುಗ್ಗಿ, ಸೇತುವೆಗಳು ಮತ್ತು ಮನೆಗಳನ್ನು ಕೊಚ್ಚಿಕೊಂಡು ಹೋದ ಪ್ರವಾಹದಲ್ಲಿ ಇಲ್ಲಿಯವರೆಗೆ 95 ಮಂದಿ ಸಾವನ್ನಪ್ಪಿದ್ದಾರೆ ಎಂದು ನೇಪಾಳದ ಮಾಧ್ಯಮಗಳು ವರದಿ ಮಾಡಿವೆ. ಟಿಬೆಟ್‌ನ ಗೈರಿಯಾಂಗ್ ಬಂದರು ಪ್ರದೇಶದಲ್ಲಿ ಬೃಹತ್ ಅಲೆಯೊಂದು ಉಕ್ಕಿ ಬಂದು, ರಾಸುವಾ ಕಡೆಗೆ ಸಾಗುವ ಮುನ್ನ ವಲಸೆ ಕಚೇರಿಯ ಮೇಲೆ ಅಪ್ಪಳಿಸಿ ಕುಸಿಯುವ ದೃಶ್ಯಗಳು ಕಂಡುಬಂದಿವೆ. ಇದು ಭೋಟೆ ಕೋಸಿ ನದಿಯ ಉದ್ದಕ್ಕೂ ವ್ಯಾಪಕ ಹಾನಿಯನ್ನುಂಟುಮಾಡಿದೆ.
ಪ್ರಳಯದ ದೃಶ್ಯವನ್ನೇ ಹೋಲುವ ವಿಡಿಯೋವೊಂದನ್ನು ಹಂಚಿಕೊಂಡ ಸದ್ಗುರು, ಕೈಲಾಸದಿಂದ ಹಿಂತಿರುಗುತ್ತಿದ್ದ ತಮ್ಮ ತಂಡವು ಟಿಬೆಟ್‌ನ ಗೈರಿಯಾಂಗ್‌ನಲ್ಲಿ ಎದುರಿಸಿದ ದುರಂತದ ಬಗ್ಗೆ ಮಾಹಿತಿ ನೀಡಿದ್ದಾರೆ. ಚೀನಾದ ಟಿಬೆಟ್‌ನಲ್ಲಿರುವ ಗೈರಿಯಾಂಗ್‌ನಲ್ಲಿ ಭೀಕರ ಹಠಾತ್ ಪ್ರವಾಹ ಸಂಭವಿಸಿದೆ ಮತ್ತು ನಮ್ಮ ಕೈಲಾಸ ಯಾತ್ರಾ ತಂಡಗಳಲ್ಲಿ ಒಂದು ಇದರಲ್ಲಿ ಸಿಲುಕಿಕೊಂಡಿದೆ. ಅವರು ಹಿಂತಿರುಗುವಾಗ ವಲಸೆ ಕಚೇರಿಯಲ್ಲಿದ್ದಾಗ ಪ್ರವಾಹ ಉಂಟಾಗಿದ್ದು, ಕಟ್ಟಡ ಮತ್ತು ಪಟ್ಟಣದ ಬಹುಭಾಗವು ಪ್ರವಾಹದ ನೀರಿನಲ್ಲಿ ಮುಳುಗಿರುವಂತೆ ತೋರುತ್ತಿದೆ ಎಂದು ಸದ್ಗುರು ಹೇಳಿಕೊಂಡಿದ್ದಾರೆ.
ವಲಸೆ ಕಚೇರಿಯಲ್ಲಿದ್ದವರ ಸ್ಥಿತಿಗತಿ ಅಥವಾ ಇರುವಿಕೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ. ತಮ್ಮ ಸ್ವಯಂಸೇವಕರು ಮತ್ತು ಬೆಂಬಲ ತಂಡಗಳು ತೀವ್ರ ಆತಂಕದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ. "ನಾವು ಆ ಸ್ಥಳವನ್ನು ತಲುಪಲು ಸಾಧ್ಯವೇ ಎಂದು ನೋಡಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಎಷ್ಟೇ ಅಪಾಯವಿದ್ದರೂ ರಕ್ಷಣಾ ಕಾರ್ಯಗಳಲ್ಲಿ ಭಾಗವಹಿಸಲು ಸಿದ್ಧರಿದ್ದೇವೆ ಎಂದು ಸದ್ಗುರು ಹೇಳಿದ್ದಾರೆ.
ತಮ್ಮ ಯಾತ್ರೆಯ ಭಾಗವಾಗಿದ್ದ 21 ಗುಂಪುಗಳ ಪೈಕಿ, 495 ಮಂದಿ ಈಗಾಗಲೇ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ಹಾಗೆಯೇ 743 ಮಂದಿ ಸದ್ಯ ಟಿಬೆಟ್‌ನಲ್ಲಿದ್ದರೆ, 148 ಮಂದಿ ನೇಪಾಳದಲ್ಲಿದ್ದಾರೆ. ಮೂವರು ಸ್ವಯಂಸೇವಕರು ನೇಪಾಳದ ತಿಮುರೆಯಲ್ಲಿರುವುದಾಗಿಯೂ ಅವರು ತಿಳಿಸಿದ್ದಾರೆ.
ನೇಪಾಳ ಪ್ರವಾಸೋದ್ಯಮ ಮಂಡಳಿಯು ಕಣ್ಮರೆಯಾಗಿದ್ದಾರೆ ಎಂದು ವರದಿ ಮಾಡಿರುವ ಕೈಲಾಸ ಯಾತ್ರಾರ್ಥಿಗಳಾದ 105 ಭಾರತೀಯರ ಪೈಕಿ ವಲಸೆ ಕಚೇರಿಯಲ್ಲಿದ್ದ 77 ಮಂದಿ ಸೇರಿದ್ದಾರೆ ಎಂದು ಭಾವಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಕನಿಷ್ಠ 384 ಪ್ರವಾಸಿಗರು ಸಂಪರ್ಕ ಕಳೆದುಕೊಂಡಿದ್ದಾರೆ. ಇವರಲ್ಲಿ 291 ವಿದೇಶಿಯರು ಮತ್ತು 93 ನೇಪಾಳಿ ಪ್ರಜೆಗಳು ಸೇರಿದ್ದಾರೆ ಎಂದು ಹೇಳಿಕೆಯೊಂದು ತಿಳಿಸಿದೆ.
ಈ ಪ್ರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನೂರಾರು ಇತರರ ಕುಟುಂಬಗಳು ಮತ್ತು ಆಪ್ತರ ನೋವಿನಲ್ಲಿ ನಾನೂ ಭಾಗಿಯಾಗಿದ್ದೇನೆ; ಈ ಅತ್ಯಂತ ಕಠಿಣ ಸಮಯದಲ್ಲಿ ನಾವು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಧ್ಯವಿರುವ ಅತ್ಯುತ್ತಮ ಕ್ರಮ ಕೈಗೊಳ್ಳಲು ನಾನು ಕೂಡಾ ಆ ಪ್ರದೇಶದಲ್ಲಿದ್ದೇನೆ ಎಂದು ಸದ್ಗುರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.