

ಮುಂಬೈ: ಸರ್ಕಾರಿ ಶಾಲೆ ಸರಿಪಡಿಸಿ ಅಭಿಯಾನದ ಭಾಗವಾಗಿ 'ಕಾಕ್ರೋಚ್ ಜನತಾ ಪಾರ್ಟಿ'ಯ ಸ್ಥಾಪಕ ಅಭಿಜೀತ್ ದೀಪ್ಕೆ ಶನಿವಾರ ತಮ್ಮ ತವರು ಜಿಲ್ಲೆಯಾದ ಹಿಂಗೋಲಿಯ ಔಂಧಾದಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿಗಳಿಗಾಗಿ ಮೀಸಲಾದ ಆಹಾರದ ಪ್ಯಾಕೆಟ್‌ಗಳ ಅವಧಿ ಮುಗಿದಿರುವುದನ್ನು ಪತ್ತೆಹಚ್ಚಿರುವುದಾಗಿ ಅವರು ಹೇಳಿದರು.
ಅಲ್ಲದೆ, ದೋಷಪೂರಿತ ವಾಟರ್ ಫಿಲ್ಟರ್ ಮತ್ತು ಶಾಲೆಯ ಶೌಚಾಲಯದಲ್ಲಿ ನೀರಿನ ಪೂರೈಕೆ ಇಲ್ಲದಿರುವಂತಹ ಸಮಸ್ಯೆಗಳನ್ನೂ ಅವರು ಪ್ರಸ್ತಾಪಿಸಿದರು. ಮಸಾಲೆ ಪದಾರ್ಥಗಳ ಪ್ಯಾಕೆಟ್‌ಗಳನ್ನು ಮಾಧ್ಯಮಗಳಿಗೆ ತೋರಿಸಿ, ಅವುಗಳ ಅವಧಿ ಫೆಬ್ರವರಿಯಲ್ಲೇ ಮುಗಿದಿದೆ ಎಂದು ಕಿಡಿಕಾರಿದರು.
ಫೆಬ್ರವರಿಯಲ್ಲೇ ಅವಧಿ ಮುಗಿದ ಪ್ಯಾಕೆಟ್‌ಗಳ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಈಗ ಸೆಪ್ಟೆಂಬರ್ ತಿಂಗಳು ಆರಂಭವಾಗುತ್ತಿದೆ. ಸಚಿವರ ಮಕ್ಕಳಿಗೂ ಇದೇ ಪ್ಯಾಕೆಟ್‌ನ ಆಹಾರವನ್ನು ಅವರು (ಸಿಬ್ಬಂದಿ) ನೀಡುತ್ತಾರೆಯೇ? ಇವರು ಬಡ ಕುಟುಂಬಗಳಿಂದ ಬಂದ ಮಕ್ಕಳು ಎಂಬ ಕಾರಣಕ್ಕೆ ಅವಧಿ ಮುಗಿದ ಆಹಾರವನ್ನು ನೀಡುತ್ತೀರಾ?" ಎಂದು ಅವರು ಪ್ರಶ್ನಿಸಿದರು.
ಶಾಲೆಯ ಮೇಲ್ಛಾವಣಿಯ ನೀರಿನ ಟ್ಯಾಂಕ್ ಮತ್ತು ಅದರಲ್ಲಿರುವ ನೀರನ್ನು ಪರಿಶೀಲಿಸಿದ ದೀಪ್ಕೆ, ಆ ಪ್ರದೇಶದ ಸಂಬಂಧಪಟ್ಟ ಅಧಿಕಾರಿಯೊಂದಿಗೆ ಮಾತನಾಡಿದರು. "ಆರು ತಿಂಗಳಿಂದ ಈ ಆಹಾರದ ಪ್ಯಾಕೆಟ್‌ಗಳನ್ನು ಬಳಸಲಾಗುತ್ತಿದೆ. ಇಲ್ಲಿ ಫಿಲ್ಟರ್ ಇದೆ. ಆದರೆ ಅದು ಕಾರ್ಯನಿರ್ವಹಿಸುತ್ತಿಲ್ಲವಾದ್ದರಿಂದ ವಿದ್ಯಾರ್ಥಿಗಳು ಬೋರ್‌ವೆಲ್ ನೀರನ್ನು ಕುಡಿಯುತ್ತಿದ್ದಾರೆ. ಶೌಚಾಲಯದಲ್ಲೂ ನೀರಿಲ್ಲ ಎಂದು ಅವರು ದೂರವಾಣಿ ಮೂಲಕ ಅಧಿಕಾರಿಗೆ ತಿಳಿಸಿದರು.
ವಿದ್ಯಾರ್ಥಿಗಳನ್ನು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ದೀಪ್ಕೆ ಆರೋಪಿಸಿದರು. "ಶಾಲೆಯಲ್ಲಿ ನಾಲ್ಕು ತರಗತಿಗಳಿಗೆ ಅನುಮೋದನೆ ಇದ್ದರೂ, 87 ವಿದ್ಯಾರ್ಥಿಗಳಿಗೆ ಕೇವಲ ಎರಡು ತರಗತಿ ಕೊಠಡಿಗಳಿವೆ ಎಂದು ಅವರು ಹೇಳಿದರು.
ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆಗಳನ್ನು ಪರಿಹರಿಸಲು ಹಾಗೂ ಬಹಿರಂಗಪಡಿಸಲು ಮತ್ತು ಸರ್ಕಾರದಿಂದ ಹೊಣೆಗಾರಿಕೆಯನ್ನು ಒತ್ತಾಯಿಸಲು ದೀಪ್ಕೆ ಆಗಸ್ಟ್ 15 ರಂದು 'ಸ್ಕೂಲ್ ಥಿಕ್ ಕರೋ' ಅಭಿಯಾನ ಆರಂಭಿಸಿದರು.