ನೇಪಾಳ ಪ್ರವಾಹದ ರೌದ್ರಾವತಾರ; 5ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ; ಸಾವಿನ ಸಂಖ್ಯೆ 734ಕ್ಕೆ ಏರಿಕೆ, 2,498 ಮಂದಿ ನಾಪತ್ತೆ..!

ಬುಧವಾರ ಚೀನಾ-ನೇಪಾಳ ಗಡಿ ಪ್ರದೇಶದಲ್ಲಿ ಹಿಮನದಿ ಕುಸಿತದಿಂದ ಏಕಾಏಕಿ ಭಾರೀ ಪ್ರಮಾಣದ ನೀರು ಮತ್ತು ಕೆಸರು ಹರಿದು ಬಂದ ಪರಿಣಾಮ ಹಿಮಾಲಯದ ಕಣಿವೆಗಳಲ್ಲಿದ್ದ ಗ್ರಾಮಗಳು ಕೊಚ್ಚಿಹೋಗಿದ್ದು, ಪ್ರಮುಖ ಮೂಲಸೌಕರ್ಯಗಳು ಹಾನಿಗೊಳಗಾಗಿವೆ.
Nepal floods
ನೇಪಾಳ ಪ್ರವಾಹ
Updated on

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದಾಗಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಮೃತರ ಸಂಖ್ಯೆ 734 ಕ್ಕೆ ಏರಿಕೆಯಾಗಿದೆ.

ಇಂದು ರಕ್ಷಣಾ ಕಾರ್ಯಾಚರಣೆಯು 5ನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನೂ 2,498 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (NDRRMA) ತಿಳಿಸಿದೆ.

ಅಧಿಕಾರಿಗಳು ಭಾನುವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ನೇಪಾಳ ಮತ್ತು ಟಿಬೆಟ್‌ನಲ್ಲಿ ಪ್ರವಾಹ ಹಾಗೂ ಭೂಕುಸಿತದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 750ಕ್ಕೆ ತಲುಪಿದ್ದು, ಎರಡೂ ಪ್ರದೇಶಗಳಲ್ಲಿ ಒಟ್ಟು 3,044 ಮಂದಿ ನಾಪತ್ತೆಯಾಗಿದ್ದಾರೆ. ನೇಪಾಳದಲ್ಲಿ 2,498 ಮಂದಿ ನಾಪತ್ತೆಯಾಗಿದ್ದು, ಇವರಲ್ಲಿ ವಿದೇಶಿಗರೂ ಸೇರಿದ್ದಾರೆ. ಟಿಬೆಟ್‌ನಲ್ಲಿ 16 ಮಂದಿ ಮೃತಪಟ್ಟಿದ್ದು, 546 ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರ ಚೀನಾ-ನೇಪಾಳ ಗಡಿ ಪ್ರದೇಶದಲ್ಲಿ ಹಿಮನದಿ ಕುಸಿತದಿಂದ ಏಕಾಏಕಿ ಭಾರೀ ಪ್ರಮಾಣದ ನೀರು ಮತ್ತು ಕೆಸರು ಹರಿದು ಬಂದ ಪರಿಣಾಮ ಹಿಮಾಲಯದ ಕಣಿವೆಗಳಲ್ಲಿದ್ದ ಗ್ರಾಮಗಳು ಕೊಚ್ಚಿಹೋಗಿದ್ದು, ಪ್ರಮುಖ ಮೂಲಸೌಕರ್ಯಗಳು ಹಾನಿಗೊಳಗಾಗಿವೆ. ನೇಪಾಳದಲ್ಲಿ ಈವರೆಗೆ 3,700ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.

ನೇಪಾಳದ ರಸುವಾ ಜಿಲ್ಲೆಯಲ್ಲಿ ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ಸಿಲುಕಿದ್ದಾರೆ ಎನ್ನಲಾದ ಕಾರ್ಮಿಕರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರಿದಿದೆ.

ತ್ರಿಶೂಲಿ 3ಎ ಜಲವಿದ್ಯುತ್ ಯೋಜನೆಯ ಸ್ಥಳದಲ್ಲಿ ನೇಪಾಳ ಸೇನೆ ಸುರಂಗದೊಳಗೆ ಪೈಪ್ ಅಳವಡಿಸಿ, ಸಣ್ಣ ರಂಧ್ರದ ಮೂಲಕ ಗಾಳಿ ಪೂರೈಸಲು ಆರಂಭಿಸಿದೆ. ತ್ರಿಶೂಲಿ 3ಎ ಮತ್ತು 3ಬಿ ಯೋಜನೆಗಳಲ್ಲಿ 100ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಸಾಧ್ಯತೆಯಿದೆ. ಆದರೆ, ಮಳೆ ಹಾಗೂ ನದಿಗಳ ನೀರಿನ ಮಟ್ಟ ಏರಿಕೆಯಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.

ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆ ಹಾಗೂ ಚೀನಾ ಭಾಗದಲ್ಲಿರುವ ತೀವ್ರವಾಗಿ ಹಾನಿಗೊಳಗಾದ ಗ್ಯಿರಾಂಗ್ ಗಡಿ ಮಾರ್ಗದಲ್ಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

Nepal floods
ನೇಪಾಳ ಜಲಪ್ರಳಯ: ಕಠ್ಮಂಡು ತಲುಪಿದ ಭಾರತದ ಪರಿಹಾರ ಸಾಮಗ್ರಿ ಹೊತ್ತ 4ನೇ ವಿಮಾನ, ರಕ್ಷಣಾ ಸಾಧನ–ವಿಧಿವಿಜ್ಞಾನ ತಜ್ಞರ ತಂಡ ರವಾನೆ..!

ಜಲವಿದ್ಯುತ್ ನಿರ್ಮಾಣ ಸ್ಥಳದಲ್ಲಿನ ಸುರಂಗಗಳು ದಪ್ಪ ಕೆಸರಿನಿಂದ ತುಂಬಿರುವುದರಿಂದ ರಕ್ಷಣಾ ಕಾರ್ಯ ಮುಂದುವರಿಸಲಾಗುವುದು ಎಂದು ನೇಪಾಳ ಸೇನೆಯ ವಕ್ತಾರ ಬ್ರಿಗೇಡಿಯರ್ ಜನರಲ್ ರಾಜಾ ರಾಮ್ ಬಸ್ನೆಟ್ ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಕುಟುಂಬ ಸದಸ್ಯರಿಗಾಗಿ ಸಂಬಂಧಿಕರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಬಿದೂರ್‌ನ ಸೇನಾ ನೆಲೆಯಲ್ಲಿ ರಕ್ಷಿಸಲ್ಪಟ್ಟವರ ಪಟ್ಟಿಗಳನ್ನು ಪರಿಶೀಲಿಸಲು ಕುಟುಂಬಸ್ಥರು ಜಮಾಯಿಸಿದ್ದರು. ಕಠ್ಮಂಡುವಿನ ಆಸ್ಪತ್ರೆಗಳ ಹೊರಭಾಗದಲ್ಲೂ ನಾಪತ್ತೆಯಾದವರ ಕುರಿತು ಮಾಹಿತಿ ಪಡೆಯಲು ಜನರು ಗಾಯಾಳುಗಳು ಹಾಗೂ ರಕ್ಷಿಸಲ್ಪಟ್ಟವರ ಪಟ್ಟಿಗಳನ್ನು ಪರಿಶೀಲಿಸುತ್ತಿದ್ದಾರೆ.

ಅತ್ಯಂತ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಲ್ಲಿ ಒಂದಾದ ನುವಾಕೋಟ್‌ಗೆ ಹೆಲಿಕಾಪ್ಟರ್‌ಗಳ ಮೂಲಕ ಬಟ್ಟೆ, ನೂಡಲ್ಸ್, ಬಿಸ್ಕತ್ ಹಾಗೂ ಅಕ್ಕಿ ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದ್ದು, ವಾಪಸ್ ಬರುವಾಗ ಬದುಕುಳಿದವರನ್ನು ಸ್ಥಳಾಂತರಿಸಲಾಗುತ್ತಿದೆ. ಹಲವರು ಧರಿಸಿದ್ದ ಬಟ್ಟೆ ಹೊರತುಪಡಿಸಿ ಬೇರೇನನ್ನೂ ತೆಗೆದುಕೊಂಡು ಬರಲು ಸಾಧ್ಯವಾಗಿಲ್ಲ. ಪ್ರವಾಹಪೀಡಿತ ಪ್ರದೇಶಗಳಿಂದ ಸೈನಿಕರು ಮಕ್ಕಳು ಮತ್ತು ವೃದ್ಧರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯುತ್ತಿದ್ದಾರೆ.

ಈ ದುರಂತದಿಂದ ನೇಪಾಳದ ಜಲವಿದ್ಯುತ್ ವಲಯ ಹಾಗೂ ಪ್ರಮುಖ ಯಾತ್ರಾ ಮತ್ತು ಚಾರಣ ಮಾರ್ಗಗಳಿಗೂ ಭಾರೀ ಹೊಡೆತ ಬಿದ್ದಿದೆ. ನೇಪಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, 933 ಜಲವಿದ್ಯುತ್ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಕೈಲಾಸ ಪರ್ವತದತ್ತ ತೆರಳುತ್ತಿದ್ದ ಚಾರಣಿಗರು ಮತ್ತು ಹಿಂದೂ ಯಾತ್ರಿಕರು ಸೇರಿದಂತೆ ನೂರಾರು ವಿದೇಶಿಗರ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.

ದುರ್ಗಮ ಪರ್ವತಗಳು ಮತ್ತು ಕಿರಿದಾದ ಕಣಿವೆಗಳಿಂದಾಗಿ ರಕ್ಷಣಾ ಕಾರ್ಯಾಚರಣೆ ಸವಾಲಿನಿಂದ ಕೂಡಿದೆ. ಸುರಂಗ ರಕ್ಷಣೆ, ಬದುಕುಳಿದವರ ಪತ್ತೆ ತಂತ್ರಜ್ಞಾನ, ವಿಧಿವಿಜ್ಞಾನ ಮತ್ತು ಡಿಎನ್‌ಎ ವಿಶ್ಲೇಷಣೆ ಹಾಗೂ ಪತ್ತೆಯಾದ ಮೃತದೇಹಗಳ ಸಂರಕ್ಷಣೆಗೆ ಅಗತ್ಯವಿರುವ ವಿಶೇಷ ನೆರವನ್ನು ನೇಪಾಳ ಕೋರಿದೆ. ಭಾರತದ 11 ಸದಸ್ಯರ ಸುರಂಗ ರಕ್ಷಣಾ ಪರಿಶೀಲನಾ ತಂಡ ಈಗಾಗಲೇ ನೇಪಾಳದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಹಿಮಾಲಯದಲ್ಲಿ ಹೊಸದಾಗಿ ರೂಪುಗೊಂಡಿದ್ದ ಸರೋವರವೊಂದರ ಮೇಲೂ ಅಧಿಕಾರಿಗಳು ನಿಗಾ ಇರಿಸಿದ್ದಾರೆ. ಮತ್ತೊಂದು ಪ್ರವಾಹ ಸಂಭವಿಸಬಹುದೆಂಬ ಆತಂಕದ ನಡುವೆಯೇ, ಸರೋವರದ ಗಾತ್ರ ಗಣನೀಯವಾಗಿ ಕುಗ್ಗಿದ್ದು, ಸ್ವಾಭಾವಿಕವಾಗಿ ನೀರು ಹೊರಹರಿದ ಬಳಿಕ ಬಹುತೇಕ ಬರಿದಾಗಿದೆ ಎಂದು ಚೀನಾ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ತಕ್ಷಣ ಮತ್ತೊಂದು ಭಾರೀ ನೀರಿನ ಹರಿವಿನ ಆತಂಕ ಕಡಿಮೆಯಾಗಿದೆ.

ಭಾರತದಿಂದ ನೇಪಾಳಕ್ಕೆ ಈವರೆಗೆ 57 ಮೆಟ್ರಿಕ್ ಟನ್‌ಗೂ ಹೆಚ್ಚು ಪರಿಹಾರ ಸಾಮಗ್ರಿಗಳು ತಲುಪಿವೆ. ಚೀನಾ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳೂ ನೆರವು ನೀಡುತ್ತಿವೆ. ಅಮೆರಿಕ ಮತ್ತು ಕೆನಡಾ ತಲಾ 3.6 ಮಿಲಿಯನ್ ಡಾಲರ್ ಮಾನವೀಯ ನೆರವು ಘೋಷಿಸಿದ್ದು, ಬ್ರಿಟನ್ 6.8 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ತಿಳಿಸಿದೆ. ವಿಶ್ವಸಂಸ್ಥೆ ತುರ್ತು ನೆರವಿಗಾಗಿ 2.5 ಮಿಲಿಯನ್ ಡಾಲರ್ ಬಿಡುಗಡೆ ಮಾಡಿದೆ.

ಐದನೇ ದಿನಕ್ಕೆ ಕಾಲಿಟ್ಟಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನಾಪತ್ತೆಯಾಗಿರುವವರನ್ನು ಪತ್ತೆಹಚ್ಚುವುದು ಹಾಗೂ ಮೃತಪಟ್ಟವರ ಗುರುತು ಪತ್ತೆ ಮಾಡುವುದು ಅಧಿಕಾರಿಗಳ ಪ್ರಮುಖ ಆದ್ಯತೆಯಾಗಿದೆ. ದುರಂತದ ಪ್ರಮಾಣವನ್ನು ಗಮನಿಸಿದರೆ ಪುನರ್‌ನಿರ್ಮಾಣದ ವೆಚ್ಚ ಹಲವು ಶತಕೋಟಿ ಡಾಲರ್‌ಗಳಿಗೆ ತಲುಪಬಹುದು ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com