

ನವದೆಹಲಿ: ಇಂದು ಬೆಳಗ್ಗೆ ಸಂಸತ್ತಿನ ಆವರಣದಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ನಡುವೆ ಮಾತಿನ ಚಕಮಕಿ ನಡೆದಿದೆ.
ಕಲಾಪಕ್ಕೂ ಮುನ್ನಾ ನಡೆದ ಪ್ರತಿಭಟನೆ ವೇಳೆಯಲ್ಲಿ ಮಾಜಿ ಕಾಂಗ್ರೆಸ್ ನಾಯಕರಾಗಿದ್ದ ಬಿಟ್ಟು ಅವರನ್ನು "ದೇಶದ್ರೋಹಿ ಸ್ನೇಹಿತ" (Traitorfriend) ಎಂದು ಕರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರವನೀತ್ ಬಿಟ್ಟು, ರಾಹುಲ್ ಗಾಂಧಿಯನ್ನು "ದೇಶ್ ಕೆ ದುಷ್ಮನ್ (ರಾಷ್ಟ್ರದ ಶತ್ರು) ಎಂದಿದ್ದಾರೆ.
ಮೂರು ಬಾರಿ ಸಂಸದ ಮತ್ತು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ (MoS) ಬಿಟ್ಟು, 2024 ರ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು. ಪಾರ್ಲಿಮೆಂಟ್ ನ ಪ್ರಮುಖ ದ್ವಾರದ ಬಳಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಮಾತಿನ ಚಕಮಕಿ ನಡೆದಿದೆ.
ರವನೀತ್ ಸಿಂಗ್ ಬಿಟ್ಟು ಹೋಗುತ್ತಿರುವುದನ್ನು ನೋಡಿದ ರಾಹುಲ್ ಗಾಂಧಿ, "ಇಲ್ಲಿ ಒಬ್ಬ ದೇಶದ್ರೋಹಿ ನಡೆದುಕೊಂಡು ಹೋಗುತ್ತಿದ್ದಾರೆ. ಅವರ ಮುಖ ನೋಡಿ ಎಂದು ಹೇಳಿ, ಬಿಟ್ಟುಗೆ ಶೇಕ್ ಹ್ಯಾಂಡ್ ಮಾಡುತ್ತಾರೆ. ಹಲೋ, ಬ್ರದರ್ ನನ್ನ ದೇಶದ್ರೋಹಿ ಸ್ನೇಹಿತ. ಚಿಂತೆ ಮಾಡಬೇಡಿ. ಮುಂದೆ ಮತ್ತೆ ಕಾಂಗ್ರೆಸ್ ಗೆ ಬರ್ತೀರಾ ಎಂದಿದ್ದಾರೆ. ಆಗ ಶೇಕ್ ಹ್ಯಾಂಡ್ ಮಾಡದ ಬಿಟ್ಟು, ರಾಹುಲ್ ಗಾಂಧಿಯನ್ನು ದೇಶದ ಶತ್ರು ಅಂತಾ ಕರೆದಿದ್ದಾರೆ. ಅಲ್ಲದೇ, ಯುದ್ಧವನ್ನು ಗೆದ್ದಂತೆ ಕುಳಿತಿದ್ದಾರೆ ಎಂದು ಪ್ರತಿಭಟನಾನಿರತ ಸಂಸದರ ಕಡೆಗೆ ತಿರುಗಿ ಹೇಳ್ತಾರೆ.
ಬಳಿಕ ರಾಹುಲ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸಿದೆ. ದೇಶದ್ರೋಹಿಗೆ ಬೇರೆ ಯಾವ ಪದ ಸರಿಹೊಂದುವುದಿಲ್ಲ ಎಂದು ಹೇಳಿದೆ. ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಬಿಡದಿರುವಾಗ ನಾವೇನು ಮಾಡಲು ಸಾಧ್ಯ?, ಬಿಟ್ಟು ಅವರನ್ನು ಸಂಸದರನ್ನಾಗಿಸಿದ್ದು ಯಾರು?, ದ್ರೋಹಿ ಬಗ್ಗೆ ಇನ್ನೇನು ಹೇಳಲಿ? ಎಂದು ಕಾಂಗ್ರೆಸ್ ಸಂಸದ ಅಮರಿಂದರ್ ರಾಜಾ ವಾರಿಂಗ್ ಹೇಳಿದ್ದಾರೆ.
ಎಂಟು ಪ್ರತಿಪಕ್ಷಗಳ ಸದಸ್ಯರನ್ನು ಲೋಕಸಭೆಯಿಂದ ಅಮಾನತುಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ಸಂಸತ್ ಆವರಣದಲ್ಲಿ ಮುಂಜಾನೆ ಪ್ರತಿಭಟನೆ ನಡೆಸಿದ್ದರು. ಸದನದ ನಿಯಮಗಳ ಉಲ್ಲಂಘನೆ ಮತ್ತು ಕುರ್ಚಿಯ ಮೇಲೆ ಕಾಗದಗಳನ್ನು ಎಸೆದಿದ್ದಕ್ಕಾಗಿ ಎಂಟು ಸಂಸದರನ್ನು ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ.
ಈ ಸಂಸದರಲ್ಲಿ ಕಾಂಗ್ರೆಸ್ ಸದಸ್ಯರಾದ ಹೈಬಿ ಈಡನ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಮಾಣಿಕ್ಕಂ ಟ್ಯಾಗೋರ್, ಗುರ್ಜಿತ್ ಸಿಂಗ್ ಔಜ್ಲಾ, ಪ್ರಶಾಂತ್ ಯಾದರಾವ್ ಪಡೋಲೆ, ಚಾಮಲಾ ಕಿರಣ್ ಕುಮಾರ್ ರೆಡ್ಡಿ ಮತ್ತು ಡೀನ್ ಕುರಿಯಾಕೋಸ್ ಹಾಗೂ ಸಿಪಿಎಂ ಸಂಸದ ಎಸ್ ವೆಂಕಟೇಶನ್ ಸೇರಿದ್ದಾರೆ.
Advertisement