

ನವದೆಹಲಿ: ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರು ಇತ್ತೀಚೆಗೆ ನಡೆದ ರಾಜ್ಯಸಭೆಯಲ್ಲಿ ಮಾಡಿದ ತಮ್ಮ ಚೊಚ್ಚಲ ಭಾಷಣದ ವೇಳೆ ತಮ್ಮ ನಟನೆಯ 'ಕಲ್ಕಿ 2898 AD' ಚಿತ್ರದ ಡೈಲಾಗ್ ಉಲ್ಲೇಖಿಸಿ ಗಮನ ಸೆಳೆದಿದ್ದಾರೆ. ಇದೀಗ ಆ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸದನವನ್ನು ಉದ್ದೇಶಿಸಿ ಮಾತನಾಡುವಾಗ ಕಮಲ್, 'ದೇಶವು ಮುಂದುವರಿಯಲು ಪ್ರಜಾಪ್ರಭುತ್ವವನ್ನು ಬೆಂಬಲಿಸಿ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಹಾಯ ಮಾಡಲು ಅಥವಾ ಗೌರವಿಸಲು ಬಯಸದವರು ಅದರ ಪ್ರಗತಿಗೆ ಅಡ್ಡಿಯಾಗಬಾರದು' ಎಂದು ಹೇಳಿದರು.
ನಂತರ ಅವರು ತಮ್ಮ ಆನ್-ಸ್ಕ್ರೀನ್ ಪಾತ್ರವಾದ ಸುಪ್ರೀಮ್ ಯಾಸ್ಕಿನ್‌ಗೆ ಸಂಬಂಧಿಸಿದ, 'ಜಗನ್ನಾಥ ರಥ ಚಕ್ರಾಲು ವಸ್ತುನ್ನಾಯಿ. ನೇನು ಏಮ್ ಚೆಪ್ತುನ್ನಾನೋ, ತೆಲುಗು ವಾಳಕಿ ಅರ್ಧಮಾವ್ತುಂದಿ (ಭಗವಾನ್ ಜಗನ್ನಾಥನ ರಥ ಬರುತ್ತಿವೆ. ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ತೆಲುಗು ಜನರು ಅರ್ಥಮಾಡಿಕೊಳ್ಳುತ್ತಾರೆ)' ಎಂದಿದ್ದಾರೆ.
ಬಳಿಕ ತಮ್ಮ ಹೇಳಿಕೆಗಳು ಯಾವುದೇ ವ್ಯಕ್ತಿ ಅಥವಾ ಆಡಳಿತವನ್ನು ಗುರಿಯಾಗಿಟ್ಟುಕೊಂಡು ಮಾಡಿಲ್ಲ. ಪ್ರಜಾಪ್ರಭುತ್ವವು ಭಿನ್ನಾಭಿಪ್ರಾಯಗಳನ್ನು ನಿವಾರಿಸುವಷ್ಟು ಶಕ್ತಿಶಾಲಿಯಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಜನರಿಗೆ ಎಂದಿಗೂ ಹಾನಿ ಮಾಡಬಾರದು. ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಈ ಹಸ್ತಕ್ಷೇಪವು ವೈಯಕ್ತಿಕ ದಾಳಿಗಿಂತ 'ವಿಚಾರಗಳ ಘರ್ಷಣೆ' ಆಗಿರುತ್ತದೆ ಎಂದು ಸ್ಪಷ್ಟಪಡಿಸಿದರು.
ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 AD ಚಿತ್ರದಲ್ಲಿ, ಕಮಲ್ ಹಾಸನ್ ಅವರು ಸುಪ್ರೀಂ ಯಾಸ್ಕಿನ್ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. 'ಜಗನ್ನಾಥ ರಥ ಚಕ್ರಾಲು ವಸ್ತುನ್ನಾಯಿ' ಎಂಬ ಡೈಲಾಗ್ ಪ್ರೀ-ಕ್ಲೈಮಾಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತದೆ.
ಈ ಡೈಲಾಗ್ ಅನ್ನು ಮೂಲತಃ ಕ್ರಾಂತಿಕಾರಿ ತೆಲುಗು ಕವಿ ಶ್ರೀ ಶ್ರೀ (ಶ್ರೀರಂಗಂ ಶ್ರೀನಿವಾಸ ರಾಯ್)ಬರೆದಿದ್ದಾರೆ. ಇದು ನಿರಂತರ ಮುನ್ನಡೆ ಮತ್ತು ಆಮೂಲಾಗ್ರ ಬದಲಾವಣೆಯ ಕಲ್ಪನೆಯನ್ನು ಪ್ರತಿನಿಧಿಸುತ್ತವೆ. ಅನ್ಯಾಯ, ಅಸಮಾನತೆ ಮತ್ತು ಹಳತಾದ ವ್ಯವಸ್ಥೆಗಳನ್ನು ಉರುಳಿಸುವುದನ್ನು ಮತ್ತು ಪ್ರಗತಿಗೆ ದಾರಿ ಮಾಡಿಕೊಡಲು ಸಾಮಾಜಿಕ ನಿಶ್ಚಲತೆಯನ್ನು ತೊಡೆದುಹಾಕುವುದನ್ನು ಸಂಕೇತಿಸುತ್ತದೆ.
ಈ ಸಾಲನ್ನು ಸಾಮಾನ್ಯವಾಗಿ ಸಾಂಪ್ರದಾಯಿಕವಾಗಿ ತುಳಿತಕ್ಕೊಳಗಾದವರಿಗೆ ಭರವಸೆಯ ಸಂದೇಶವಾಗಿ ನೋಡಲಾಗುತ್ತದೆ.
2024ರಲ್ಲಿ ಚಿತ್ರ ಬಿಡುಗಡೆಯಾದ ನಂತರ ಕೆಲವು ವೀಕ್ಷಕರು ಈ ಸಾಲನ್ನು ಬಳಸುತ್ತಿರುವ ಬಗ್ಗೆ ಗೊಂದಲ ವ್ಯಕ್ತಪಡಿಸಿದರು.
ಆ ಸಮಯದಲ್ಲಿ ಸ್ಪಷ್ಟನೆ ನೀಡಿದ್ದ ನಿರ್ದೇಶಕ ನಾಗ್ ಅಶ್ವಿನ್, 'ಅದು ಅವರ ಪಾತ್ರಕ್ಕೆ ಸರಿಹೊಂದುವ ಒಳ್ಳೆಯ ಸಾಲು ಎಂದು ನಾನು ಭಾವಿಸಿದೆ. ಅದುವೇ ಅವರ ತತ್ತ್ವ. ನೀವು ಅವರ ಬಗ್ಗೆ ಹೆಚ್ಚಿನದನ್ನು ಎರಡನೇ ಭಾಗದಲ್ಲಿ ನೋಡುತ್ತೀರಿ. ಆದಾಗ್ಯೂ, ಆ ಸಾಲುಗಳು ಅವು ಏನನ್ನು ಸೂಚಿಸುತ್ತವೆಯೋ ಅದಕ್ಕಿಂತ ಹೆಚ್ಚಿನದನ್ನು ಅರ್ಥೈಸುತ್ತವೆ ಎಂದು ನಾನು ಭಾವಿಸುವುದಿಲ್ಲ' ಎಂದಿದ್ದರು.
Advertisement