

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಇಬ್ಬರು ಜಪಾನಿ ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜಪಾನಿ ಪ್ರವಾಸಿಗರು ಬಾಡಿಗೆಗೆ ಪಡೆದಿದ್ದ ಟ್ಯಾಕ್ಸಿಯ ಚಾಲಕ ನಾಪತ್ತೆ ದೂರು ದಾಖಲಿಸಿದ್ದಾರೆ ಎಂದು ಅಶೋಕ್ ನಗರ ಸ್ಟೇಷನ್ ಹೌಸ್ ಆಫೀಸರ್(SHO) ಮೋತಿ ಲಾಲ್ ಶರ್ಮಾ ಅವರು ಹೇಳಿದ್ದಾರೆ.
ಫೆಬ್ರವರಿ 7 ರಂದು ಜಪಾನಿನ ಇಬ್ಬರು ಪುರುಷರು ನವದೆಹಲಿಯಿಂದ ಜೈಪುರಕ್ಕೆ ಬಂದು ಹೋಟೆಲ್‌ನಲ್ಲಿ ತಂಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಟ್ಯಾಕ್ಸಿ ಚಾಲಕ ಫೆಬ್ರವರಿ 7 ರ ರಾತ್ರಿ ಈ ಇಬ್ಬರನ್ನೂ ಅಶೋಕ್ ನಗರ ಪ್ರದೇಶದ ರೆಸ್ಟೋರೆಂಟ್‌ಗೆ ಕರೆದೊಯ್ದರು. ಆದರೆ ಅವರು ವಾಪಸ್ ಬರಲಿಲ್ಲ ಎಂದು SHO ಹೇಳಿದ್ದಾರೆ.
"ಚಾಲಕ ಫೆಬ್ರವರಿ 8 ರ ಬೆಳಗ್ಗೆತನಕ ಅವರಿಗಾಗಿ ಕಾಯುತ್ತಿದ್ದನು. ಆದರೆ ಅವರು ಚಾಲಕನನ್ನು ಸಂಪರ್ಕಿಸಲಿಲ್ಲ ಮತ್ತು ಅವರು ತಾವು ತಂಗಿದ್ದ ಹೋಟೆಲ್ ಅನ್ನು ಸಹ ತಲುಪಿಲ್ಲ. ಹೀಗಾಗಿ ಚಾಲಕ ಸೋಮವಾರ ಪೊಲೀಸರನ್ನು ಸಂಪರ್ಕಿಸಿ ನಾಪತ್ತೆ ದೂರು ದಾಖಲಿಸಿದ್ದಾರೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು SHO ಶರ್ಮಾ ಹೇಳಿದ್ದಾರೆ.
Advertisement