

ನವದೆಹಲಿ: ರಾಷ್ಟ್ರೀಯ ಗೀತೆ ವಂದೇ ಮಾತರಂ ಗೀತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಹೊರಡಿಸಿದೆ. ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ, ಎಲ್ಲಾ ಶಾಲೆಗಳಲ್ಲಿ ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಪಡಿಸಿದೆ. ಅಲ್ಲದೇ ವಂದೇ ಮಾತರಂ ಹಾಡುವಾಗ ಅಥವಾ ನುಡಿಸುವಾಗ ಎಲ್ಲರೂ ಎದ್ದು ನಿಲ್ಲಬೇಕು. ರಾಷ್ಟ್ರಗೀತೆಗೂ ಮುನ್ನ 3 ನಿಮಿಷ 10 ಸೆಕೆಂಡ್ ನ ವಂದೇ ಮಾತರಂನ 6 ಚರಣಗಳನ್ನು ಹಾಡಬೇಕು ಎಂದು ನಿರ್ದೇಶನ ನೀಡಿದೆ.
ಇದನ್ನು 'ಏಕಪಕ್ಷೀಯ' ಮತ್ತು 'ನಿರಂಕುಶ' ಎಂದು ಮುಸ್ಲಿಂ ಸಂಘಟನೆ ಜಮಿಯತ್ ಉಲಮಾ-ಇ-ಹಿಂದ್ ಗುರುವಾರ ಹೇಳಿದೆ. ಇದು ಸಂವಿಧಾನ ಖಾತರಿಪಡಿಸುವ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಉಗ್ರ ದಾಳಿ ಎಂದು ಬಣ್ಣಿಸಿದೆ.
ಈ ಕುರಿತು ಮಾತನಾಡಿರುವ ಜಮಿಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ, ವಂದೇ ಮಾತರಂ ಹಾಡುವುದು ಅಥವಾ ನುಡಿಸುವುದಕ್ಕೆ ಮುಸ್ಲಿಮರು ಯಾರು ತಡೆಯುವುದಿಲ್ಲ. ಆದರೆ ಗೀತೆಯ ಕೆಲವು ಪದ್ಯಗಳು ಮಾತೃಭೂಮಿಯನ್ನು ದೇವತೆಯಾಗಿ ಬಿಂಬಿಸುವ ನಂಬಿಕೆಗಳನ್ನು ಆಧರಿಸಿವೆ. ಇದು ಏಕದೇವತಾವಾದಿ ಧರ್ಮಗಳ ಮೂಲಭೂತ ನಂಬಿಕೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಇದು ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸುವ ವ್ಯವಸ್ಥಿತ ಪ್ರಯತ್ನವಾಗಿದೆ."ಮುಸ್ಲಿಮರು ಮಾತ್ರ ಅಲ್ಲಾನನ್ನು ಪೂಜಿಸುತ್ತಾರೆ. ಈ ಗೀತೆ ಹಾಡಲು ಒತ್ತಾಯಿಸುವುದು ಸಂವಿಧಾನದ 25 ನೇ ವಿಧಿ ಮತ್ತು ಸುಪ್ರೀಂ ಕೋರ್ಟ್‌ನ ಹಲವಾರು ತೀರ್ಪುಗಳ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಾಡನ್ನು ಕಡ್ಡಾಯಗೊಳಿಸುವುದು ಮತ್ತು ಅದನ್ನು ನಾಗರಿಕರ ಮೇಲೆ ಹೇರಲು ಪ್ರಯತ್ನಿಸುವುದು ದೇಶಭಕ್ತಿಯ ಅಭಿವ್ಯಕ್ತಿಯಲ್ಲ, ಬದಲಿಗೆ ಇದು ಚುನಾವಣಾ ರಾಜಕೀಯ, ಮತೀಯ ಅಜೆಂಡಾ ಮತ್ತು ಕೆಲವು ಮೂಲಭೂತ ಸಮಸ್ಯೆಗಳಿಂದ ಸಾರ್ವಜನಿಕ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶಪೂರ್ವಕ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ ಎಂದು ಮದನಿ ಹೇಳಿದ್ದಾರೆ.
ದೇಶದ ಮೇಲಿನ ನಿಜವಾದ ಪ್ರೀತಿಯ ಘೋಷಣೆಗಳಲ್ಲಿ ಅಲ್ಲ, ಆದರೆ ಚಾರಿತ್ರ್ಯ ಮತ್ತು ತ್ಯಾಗದಲ್ಲಿದೆ. ಅದರ ಉಜ್ವಲ ಉದಾಹರಣೆಗಳನ್ನು ಮುಸ್ಲಿಮರು ಮತ್ತು ಜಮೀಯತ್ ಉಲಮಾ-ಇ-ಹಿಂದ್ ಐತಿಹಾಸಿಕ ಹೋರಾಟದಲ್ಲಿ ಕಾಣಬಹುದು. ಇಂತಹ ನಿರ್ಧಾರಗಳು ದೇಶದ ಶಾಂತಿ, ಏಕತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತವೆ ಮತ್ತು ಸಂವಿಧಾನದ ಸ್ಫೂರ್ತಿಗೆ ಧಕ್ಕೆ ತರುತ್ತವೆ ಎಂದು ಕಿಡಿಕಾರಿದ್ದಾರೆ. ವಂದೇ ಮಾತರಂ ಕಡ್ಡಾಯಗೊಳಿಸುವುದು ಸಂವಿಧಾನ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕ ತತ್ವಗಳ ಮೇಲಿನ ಸ್ಪಷ್ಟ ದಾಳಿಯಾಗಿದೆ ಎಂದು ಅವರು ಹೇಳಿದ್ದಾರೆ.
ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆ ಜನಗಣ ಮನವನ್ನು ಒಟ್ಟಿಗೆ ಹಾಡಿದರೆ ಅಥವಾ ನುಡಿಸಿದರೆ ವಂದೇ ಮಾತರಂ ಅನ್ನು ಮೊದಲು ನುಡಿಸಲಾಗುತ್ತದೆ. ಹಾಡುವಾಗ ಅಥವಾ ನುಡಿಸುವಾಗ ಪ್ರೇಕ್ಷಕರು ಎದ್ದು ನಿಲ್ಲಬೇಕು ಎಂದು ಕೇಂದ್ರ ಗೃಹ ಸಚಿವಾಲಯ ನಿರ್ದೇಶನದ ಬೆನ್ನಲ್ಲೇ ಮುಸ್ಲಿಂ ಸಂಘಟನೆ ಜಮಿಯತ್ ಈ ಹೇಳಿಕೆ ನೀಡಿದೆ.
Advertisement