

ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದಾಗ ಅವರಿಗೆ “ಸಿಂಗಂ” ಎಂದು ಜನರು ಪ್ರೀತಿಯಿಂದ ಕರೆಯುತ್ತಿದ್ದರು. ಪೊಲೀಸ್ ಅಧಿಕಾರಿಯಾಗಿ ದಕ್ಷ ಆಡಳಿತಗಾರ ಎಂದು ಹೆಸರಿತ್ತು. ಕೊನೆಕೊನೆಗೆ ಸರ್ಕಾರದ ಅಧಿಕಾರದಲ್ಲಿ ಅವರು ಆಸಕ್ತಿ ಕಳೆದುಕೊಂಡು ರಾಜೀನಾಮೆ ನೀಡಿ ಸಾರ್ವಜನಿಕ ಬದುಕಿಗೆ ಕಾಲಿಟ್ಟರು. ತಮ್ಮೂರು ತಮಿಳು ನಾಡಿಗೆ ಹೋಗಿ ರಾಜಕೀಯವೆಂಬ ಅರಣ್ಯವನ್ನು ಹೊಕ್ಕರು. ಆದರೆ ಆ ಸಿಂಹ ಈಗ ತನ್ನ ದಾರಿಯನ್ನು ಕಳೆದುಕೊಂಡಂತಾಗಿದೆ.
ಆರು ವರ್ಷಗಳ ರಾಜಕೀಯ ಜೀವನದ ನಂತರ, ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ನಾಯಕ ಅಣ್ಣಾಮಲೈ ಕುಪ್ಪುಸ್ವಾಮಿ ಅವರಿಗೆ ರಾಜಕೀಯ ಮತ್ತು ಪೊಲೀಸ್ ಸೇವೆ ಎರಡು ವಿಭಿನ್ನ ಕ್ಷೇತ್ರಗಳೆಂಬುದು ಸ್ಪಷ್ಟವಾಗಿ ಅರ್ಥವಾಗಿರಬಹುದು.
ಅಣ್ಣಾಮಲೈ ಕುಟುಂಬ ಹಿನ್ನೆಲೆ
ತಮಿಳುನಾಡಿನ ಕರೂರು ಜಿಲ್ಲೆಯ ರೈತ ಕುಟುಂಬದಲ್ಲಿ ಜನಿಸಿದ ಅಣ್ಣಾಮಲೈ, ಕೊಯಂಬತ್ತೂರಿನ ಪಿಎಸ್‌ಜಿ ತಾಂತ್ರಿಕ ಕಾಲೇಜು ಮತ್ತು ಲಖ್ನೋ ಐಐಎಂನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ 2011ರಲ್ಲಿ ಭಾರತೀಯ ಪೊಲೀಸ್ ಸೇವೆಗೆ ಸೇರಿದರು.
ಸುಮಾರು ದಶಕದ ಸೇವೆಯ ಬಳಿಕ, 2019ರ ಮೇ ತಿಂಗಳಲ್ಲಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಿದ್ದೇನೆ ಎಂದು ಕಾರಣ ನೀಡಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಹುದ್ದೆಗೆ ರಾಜೀನಾಮೆ ನೀಡಿದರು. ತಮ್ಮ ಸೇವಾ ಅವಧಿಯಲ್ಲಿ ಪ್ರಾಮಾಣಿಕ ಅಧಿಕಾರಿಯಾಗಿ ಹೆಸರು ಗಳಿಸಿದ್ದರು. ನಂತರ ಅವರು ರಾಜಕೀಯಕ್ಕೆ ಪ್ರವೇಶಿಸುವ ನಿರ್ಧಾರ ತೆಗೆದುಕೊಂಡರು.
ರಾಜಕೀಯಕ್ಕೆ ಬಂದಿದ್ದು ಹೇಗೆ?
ತಮ್ಮ ಆತ್ಮಕಥೆ Stepping Beyond Khaki: Revelations of a Real-life Singham ನಲ್ಲಿ, ಅಣ್ಣಾಮಲೈ ಅವರು 2018ರಲ್ಲಿ ಕೈಲಾಸ ಯಾತ್ರೆ ಹಾಗೂ ತಾವು ಅತ್ಯಂತ ಗೌರವಿಸಿದ್ದ ಹಿರಿಯ ಅಧಿಕಾರಿಯ ಅಕಾಲಿಕ ನಿಧನವು ತಮ್ಮ ಜೀವನದಲ್ಲಿ ಮಹತ್ವದ ತಿರುವು ನೀಡಿದವು ಎಂದು ಹೇಳಿದ್ದಾರೆ. ಈ ಘಟನೆಗಳು ಅವರಿಗೆ ಹೊಸ ಹಾಗೂ ಅಪರಿಚಿತ ದಾರಿಯನ್ನು ಆಯ್ಕೆ ಮಾಡಲು ಅಂತಿಮ ಪ್ರೇರಣೆಯಾಯಿತು ಎಂದು ಹೇಳಿಕೊಂಡಿದ್ದಾರೆ.
ಅವರು 2020ರಲ್ಲಿ ಭಾರತೀಯ ಜನತಾ ಪಕ್ಷ (BJP) ಸೇರಿದರು. ಬಳಿಕ 2021ರಲ್ಲಿ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡು, ಆ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡರು.
ಆದರೆ ನಾಲ್ಕು ವರ್ಷಗಳ ನಂತರ ಅವರ ರಾಜಕೀಯ ಜೀವನದಲ್ಲಿ ಮತ್ತೊಂದು ತಿರುವು ಎದುರಾಯಿತು. 2025ರ ಏಪ್ರಿಲ್‌ನಲ್ಲಿ ಬಿಜೆಪಿ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿತು. ಅವರ ಸ್ಥಾನಕ್ಕೆ ಮಾಜಿ ಎಐಎಡಿಎಂಕೆ ನಾಯಕ ನಾಯಿನಾರ್ ನಾಗೇಂದ್ರನ್ ಅವರನ್ನು ನೇಮಕ ಮಾಡಿದ ಕ್ರಮವನ್ನು, ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ನೇತೃತ್ವದ ಎಐಎಡಿಎಂಕೆಯೊಂದಿಗೆ ಬಿಜೆಪಿ ಮೈತ್ರಿಯನ್ನು ಪುನರುಜ್ಜೀವನಗೊಳಿಸಲು ಕೈಗೊಂಡ ಹೆಜ್ಜೆಯೆಂದು ವ್ಯಾಪಕವಾಗಿ ರಾಜಕೀಯದಲ್ಲಿ ಅರ್ಥೈಸಲಾಯಿತು.
ರಾಜಕೀಯ ವಿಶ್ಲೇಷಕರ ಪ್ರಕಾರ, ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಮೈತ್ರಿ ಮಾತುಕತೆ ಮಾಡಬೇಕೆಂದರೆ ಅಣ್ಣಾಮಲೈರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆಯೆಂಬ ಅಭಿಪ್ರಾಯವಿತ್ತು. ಜಾತಿ ಸಮೀಕರಣಗಳೂ ಇದರಲ್ಲಿ ಪಾತ್ರವಹಿಸಿದ್ದವೆಂದು ಹೇಳಲಾಗುತ್ತಿದೆ. ಅಣ್ಣಾಮಲೈ ಮತ್ತು ಇಪಿಎಸ್ ಇಬ್ಬರೂ ಗೌಂಡರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಕೆಲವರ ಅಭಿಪ್ರಾಯದಲ್ಲಿ, ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಣ್ಣಾಮಲೈ ಅವರಲ್ಲಿ ಕಂಡುಬಂದ ಅಹಂಕಾರ ಭಾವನೆ ಅವರಿಗೆ ಮುಳುವಾಯಿತು. ಅವರ ಬೆಂಬಲಿಗರು ಅವರ ಮೇಲೆ ಇನ್ನೂ ನಂಬಿಕೆಯಿಟ್ಟಿದ್ದಾರೆ.
ಇತ್ತೀಚೆಗೆ ನಡೆದ ವಿದ್ಯಮಾನದಲ್ಲಿ ಮೊನ್ನೆ ಫೆಬ್ರವರಿ 3ರಂದು, ತಮ್ಮ ತಂದೆಯ ಅನಾರೋಗ್ಯವನ್ನು ಉಲ್ಲೇಖಿಸಿ ಆರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಜವಾಬ್ದಾರಿಯಿಂದ ಅಣ್ಣಾಮಲೈ ಹಿಂದೆ ಸರಿದಿದ್ದಾರೆ. ನಂತರ ಫೆಬ್ರವರಿ 11ರಂದು ರಚಿಸಲಾದ ಚುನಾವಣಾ ನಿರ್ವಹಣಾ ಸಮಿತಿಯಲ್ಲೂ ಅವರ ಹೆಸರಿರಲಿಲ್ಲ. ಇದರಿಂದ ಪಕ್ಷದಲ್ಲಿ ಅವರ ಪಾತ್ರವೇನು ಎಂಬುದು ಸ್ಪಷ್ಟವಾಗುತ್ತಿಲ್ಲ.
ಸದಾ ಸುದ್ದಿಯಲ್ಲಿದ್ದ ಅಣ್ಣಾಮಲೈ
ರಾಜ್ಯಾಧ್ಯಕ್ಷರಾಗಿದ್ದ ವೇಳೆ ಅಣ್ಣಾಮಲೈ ಅವರು ಬಿಜೆಪಿಯನ್ನು ಸದಾ ಮಾಧ್ಯಮದ ಗಮನದಲ್ಲಿ ಇಟ್ಟಿದ್ದರು. ‘ಎನ್ ಮನ್, ಎನ್ ಮಕ್ಕಲ್’(ನನ್ನ ಮಣ್ಣು, ನನ್ನ ಜನರು) ಯಾತ್ರೆಯ ಮೂಲಕ 234 ಕ್ಷೇತ್ರಗಳನ್ನು ಭೇಟಿ ಮಾಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಮಿಳು ನಾಡಿನಲ್ಲಿ ಯಾವುದೇ ಸ್ಥಾನ ಗೆಲ್ಲದಿದ್ದರೂ, ಮತ ಶೇಕಡಾ ಸುಮಾರು 11ಕ್ಕೆ ಏರಿಕೆಯಾಗಿತ್ತು ಎಂದು ಪಕ್ಷ ಹೇಳಿಕೊಂಡಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಅಣ್ಣಾಮಲೈ ಅವರ ಜನಪ್ರಿಯತೆ ಆರಂಭದಲ್ಲಿ ಅವರ “ಶುದ್ಧ ಆಡಳಿತಗಾರ” ಎಂಬ ಇಮೇಜ್‌ನಿಂದ ಹೆಚ್ಚಾಯಿತು. ಆದರೆ ನಂತರ ಅವರ ರಾಜಕೀಯ ಶೈಲಿ ಹೆಚ್ಚು ಆಕ್ರಮಣಕಾರಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರಕ್ಕೆ ಆಧಾರಿತವಾಗಿತ್ತು.
ಡಿಎಂಕೆ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಒಳಗೊಂಡ “DMK Files” ಬಿಡುಗಡೆ, ಸಾರ್ವಜನಿಕ ಪ್ರತಿಭಟನೆಗಳು ಮತ್ತು ತೀವ್ರ ಹೇಳಿಕೆಗಳ ಮೂಲಕ ಅವರು ಗಮನ ಸೆಳೆದಿದ್ದರು. ಆದರೆ ಈ ಕ್ರಮಗಳಿಂದ ನಿರೀಕ್ಷಿತ ರಾಜಕೀಯ ಲಾಭ ಸಿಕ್ಕಿಲ್ಲವೆಂದು ಹೇಳಲಾಗುತ್ತಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಬಿಜೆಪಿ ರಾಜಕೀಯ ಸಮೀಕರಣಗಳ ಕಾರಣದಿಂದ ಅಣ್ಣಾಮಲೈ ಅವರ ಪ್ರಭಾವ ಕಡಿಮೆಯಾಗಿರುವಂತೆ ಕಾಣಬಹುದು. ಆದರೆ ಅವರ ಬೆಂಬಲಿಗರು ಇನ್ನೂ ಭವಿಷ್ಯದಲ್ಲಿ ಅವರಿಗೆ ಪ್ರಮುಖ ಹುದ್ದೆ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಊಹಾಪೋಹಗಳಿದ್ದರೂ ಅದು ಸಾಧ್ಯತೆ ಕಡಿಮೆ ಎಂದು ವಿಶ್ಲೇಷಕರು ಹೇಳುತ್ತಾರೆ. 41 ವರ್ಷದ ಅಣ್ಣಾಮಲೈ ಇನ್ನೂ ಯುವಕರಾಗಿದ್ದು, ತಮ್ಮೊಳಗಿನ ರಾಜಕೀಯ “ಸಿಂಗಂ” ನ್ನು ಮತ್ತೆ ಹೊರತೆಗೆದುಕೊಳ್ಳುವ ವಿಶ್ವಾಸ ಹೊಂದಿದ್ದಾರೆ. ಅವರ ಮುಂದಿನ ರಾಜಕೀಯ ನಡೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
Advertisement