

ಅಹಮದಾಬಾದ್: ‘ಲವ್ ಜಿಹಾದ್’ ತಡೆಯಲು ಗುಜರಾತ್ ಸರ್ಕಾರ ವಿವಾಹ ನೋಂದಣಿ ನಿಯಮಗಳಲ್ಲಿ ಗಮನಾರ್ಹ ಬದಲಾವಣೆಗೆ ಮುಂದಾಗಿದ್ದು, ಪ್ರೇಮ ವಿವಾಹಗಳ ಬಗ್ಗೆ ಪೋಷಕರಿಗೆ ವಾಟ್ಸಾಪ್ ಮೂಲಕ ಎಚ್ಚರಿಕೆ ನೀಡಲು ಯೋಜಿಸಿದೆ.
ಗುಜರಾತ್ ಸರ್ಕಾರವು ಲವ್ ಜಿಹಾದ್ ತಡೆಯಲು ಗುಜರಾತ್ ವಿವಾಹ ನೋಂದಣಿ ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿದ್ದು, ಇದು ಗೌಪ್ಯತೆ, ಪೋಷಕರ ಒಪ್ಪಿಗೆ ಮತ್ತು ಗುರುತಿನ ವಂಚನೆಯ ವಿರುದ್ಧದ ಸುರಕ್ಷತೆಗಳ ಕುರಿತು ತೀಕ್ಷ್ಣವಾದ ರಾಜಕೀಯ ಮತ್ತು ಸಾಮಾಜಿಕ ಚರ್ಚೆಯನ್ನು ಹುಟ್ಟುಹಾಕಿದೆ.
ಪ್ರಸ್ತಾವಿತ ಪ್ರಮಾಣೀಕರಣ ಅವಧಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಿದ 40 ದಿನಗಳಲ್ಲಿ ವಂಚನೆಯನ್ನು ತಡೆಗಟ್ಟಲು ಕಟ್ಟುನಿಟ್ಟಾದ ಗುರುತಿನ ಚೀಟಿ, ಸಾಕ್ಷಿ ಮತ್ತು ನೋಟರಿ ಪರಿಶೀಲನೆ ಮಾಡಲಾಗುತ್ತದೆ.
ವಿವಾಹ ನೋಂದಣಿಗಾಗಿ ಅರ್ಜಿಗಳನ್ನು ಸ್ವೀಕರಿಸಿದ ಹತ್ತು ದಿನಗಳಲ್ಲಿ ಸಹಾಯಕ ನೋಂದಣಾಧಿಕಾರಿ ಪೋಷಕರಿಗೆ ಮಾಹಿತಿ ನೀಡುತ್ತಾರೆ. ಸಹಾಯಕ ನೋಂದಣಾಧಿಕಾರಿ ಅರ್ಜಿಯನ್ನು ಸಂಬಂಧಪಟ್ಟ ಜಿಲ್ಲೆ ಅಥವಾ ತಾಲೂಕು ನೋಂದಣಾಧಿಕಾರಿಗೆ ಕಳುಹಿಸಬೇಕು. ಪರಿಶೀಲನೆ ಮತ್ತು ಉಪ-ನಿಯಮಗಳ (1 ರಿಂದ 7) ಅನುಸರಣೆಯನ್ನು ಖಚಿತಪಡಿಸಿಕೊಂಡ ನಂತರ, ಅರ್ಜಿ ಸಲ್ಲಿಸಿದ ದಿನಾಂಕದಿಂದ 40 ದಿನಗಳು ಪೂರ್ಣಗೊಂಡ ನಂತರ ಮದುವೆಯನ್ನು ನೋಂದಾಯಿಸಲಾಗುತ್ತದೆ ಎಂದು ಹೊಸ ನಿಯಮಗಳು ಹೇಳುತ್ತವೆ ಎಂದು ಗೃಹ ಸಚಿವ ಹರ್ಷ ಸಾಂಘ್ವಿ ಅವರು ವಿವರಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ಮಂಡಿಸಲಾದ ಈ ಪ್ರಸ್ತಾವನೆಯು, ರಾಜ್ಯದಲ್ಲಿ ವಿವಾಹ ನೋಂದಣಿ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಲಿದೆ. ಹೊಸ ನಿಯಮದ ಪ್ರಕಾರ, ವಧು-ವರರು ತಮ್ಮ ಹೆತ್ತವರಿಗೆ ಮದುವೆಯ ಬಗ್ಗೆ ತಿಳಿಸಿರುವುದಾಗಿ ಘೋಷಣೆಯನ್ನು ಸಲ್ಲಿಸಬೇಕಾಗುತ್ತದೆ, ಜೊತೆಗೆ ಅವರ ಪೋಷಕರ ಗುರುತಿನ ಪುರಾವೆ, ಫೋನ್ ನಂಬರ್, ವಸತಿ ಪುರಾವೆಗಳು ಸೇರಿದಂತೆ ಇತರ ದಾಖಲೆಗಳನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ವಿವಾದಾತ್ಮಕ ನಿಬಂಧನೆ
ಪ್ರಸ್ತಾವಿತ ಪ್ರಸ್ತಾವನೆಯ ಮೂಲದಲ್ಲಿ ವಿವಾದಾತ್ಮಕ ನಿಬಂಧನೆ ಇದೆ. ಪ್ರೇಮ ವಿವಾಹ ನೋಂದಣಿಗೆ ದಂಪತಿಗಳು ಅರ್ಜಿ ಸಲ್ಲಿಸಿದ ನಂತರ, ಹುಡುಗಿಯ ಪೋಷಕರಿಗೆ ವಾಟ್ಸಾಪ್ ಮೂಲಕ ಸ್ವಯಂಚಾಲಿತವಾಗಿ ವಿವರಗಳನ್ನು ನೀಡಲಾಗುತ್ತದೆ. ಆದರೆ ಅರ್ಜಿ ಸಲ್ಲಿಸಿದ 40 ದಿನಗಳ ನಂತರ ವಿವಾಹ ನೋಂದಣಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಈ 40 ದಿನಗಳ ವಿಳಂಬವು ಬಲವಂತ, ತಪ್ಪು ನಿರೂಪಣೆ ಅಥವಾ ನಕಲಿ ಗುರುತನ್ನು ಪತ್ತೆಹಚ್ಚಲು ಅವಕಾಶ ನೀಡುತ್ತದೆ ಎಂದು ಸರ್ಕಾರ ವಾದಿಸುತ್ತಿದೆ. ಈ ಕ್ರಮವನ್ನು ಸಮರ್ಥಿಸಿಕೊಂಡ ಗೃಹ ಸಚಿವ ಹರ್ಷ ಸಾಂಘ್ವಿ, "ನಾವು ಪ್ರೀತಿಯನ್ನು ವಿರೋಧಿಸುವುದಿಲ್ಲ. ಆದರೆ ಯಾರಾದರೂ 'ಸಲೀಮ್ ಸುರೇಶ್' ಆಗಿ ನಕಲಿ ಗುರುತಿನೊಂದಿಗೆ ಮಗಳನ್ನು ಬಲೆಗೆ ಬೀಳಿಸಲು ಹೋದರೆ, ರಾಜ್ಯ ಸರ್ಕಾರ ಅಂತಹ ವಂಚನೆ ಅವಕಾಶ ನೀಡುವುದಿಲ್ಲ" ಎಂದು ಸದನಕ್ಕೆ ತಿಳಿಸಿದರು.
ಪೋಷಕರ ಅನುಮತಿ ಪಡೆದಿರುವ ನಿಜವಾದ ದಂಪತಿಗಳಿಗೆ ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ. ಆದರೆ ಗುರುತನ್ನು ಮರೆಮಾಚುವವರನ್ನು ಕಠಿಣ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.
ಹೊಸ ಕಾರ್ಯವಿಧಾನದ ಬದಲಾವಣೆಗಳು ‘ಸನಾತನ ಸಂಪ್ರದಾಯಗಳು ಮತ್ತು ವಿವಾಹ ವ್ಯವಸ್ಥೆಯನ್ನು ಉಳಿಸುವ ಸರ್ಕಾರದ ಬದ್ಧತೆಯ’ ಪರಿಣಾಮವಾಗಿದೆ ಎಂದು ಸಾಂಘ್ವಿ ಹೇಳಿದ್ದಾರೆ.
ಹೆಣ್ಣುಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಾಮಾಜಿಕ ರಚನೆಯನ್ನು ಕಾಪಾಡಿಕೊಳ್ಳಲು, ಸರ್ಕಾರವು ‘ಗುಜರಾತ್ ವಿವಾಹ ನೋಂದಣಿ ಕಾಯ್ದೆ 2006’ ಅಡಿಯಲ್ಲಿ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಿದೆ. ಈ ಬದಲಾವಣೆಗಳ ಭಾಗವಾಗಿ, ಪೋಷಕರನ್ನು ಈಗ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಸೇರಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.
“ಸಮಾಜ ವಿರೋಧಿ ಅಂಶಗಳು ರಾಜ್ಯದ ಹೆಣ್ಣುಮಕ್ಕಳನ್ನು ಬಲೆಗೆ ಬೀಳಿಸಲು ತಮ್ಮ ಗುರುತನ್ನು ಮರೆಮಾಡುವ ಮೂಲಕ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು” ಎಂದು ಪಂಚಮಹಲ್ ಜಿಲ್ಲೆಯಲ್ಲಿ ನೀಡಲಾದ ನಕಲಿ ವಿವಾಹ ಪ್ರಮಾಣಪತ್ರಗಳ ಪ್ರಕರಣಗಳನ್ನು ಉಲ್ಲೇಖಿಸಿ ಸಾಂಘ್ವಿ ತಿಳಿಸಿದರು.
Advertisement