

ನವದೆಹಲಿ: ಐಪಿಎಲ್ 2026ಕ್ಕಾಗಿ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಗೆ 9.20 ಕೋಟಿ ರೂ.ಗೆ ಖರೀದಿಸಿರುವ ಕೆಕೆಆರ್ ಮಾಲೀಕ ಶಾರುಖ್ ಖಾನ್ ಅವರ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಧರ್ಮಗುರು ಜಗದ್ಗುರು ರಾಮಭದ್ರಾಚಾರ್ಯ ಅವರನ್ನು ಬಿಜೆಪಿ ನಾಯಕ ಸಂಗೀತ್ ಸಿಂಗ್ ಸೋಮ್ ಬೆಂಬಲಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿರ್ಧಾರ "ತುಂಬಾ ದುರದೃಷ್ಟಕರವಾಗಿದೆ. ಶಾರುಖ್ ಖಾನ್ ದೃಷ್ಟಿಕೋನ "ಯಾವಾಗಲೂ ದೇಶದ್ರೋಹಿಯಂತೆ' ಇರುತ್ತದೆ ಎಂದು ಕಿಡಿಕಾರಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯವೆಸಲಾಗುತ್ತಿದೆ. ಮಹಿಳೆಯರು, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗಿ, ಅವರ ಮನೆಗಳನ್ನು ಸುಟ್ಟು ಹಾಕಲಾಗುತ್ತಿದೆ. ಭಾರತ ವಿರೋಧಿ ಘೋಷಣೆಗಳನ್ನು ಮೊಳಗಿಸಲಾಗುತ್ತಿದೆ. ಇಷ್ಟೆಲ್ಲಾ ಆದರೂ ಶಾರುಖ್ ಖಾನ್ ಅವರಂತಹ ದೇಶದ್ರೋಹಿಗಳು ಹಣವನ್ನು ಎಲ್ಲಿ ಹೂಡಿಕೆ ಮಾಡ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಶಾರೂಕ್ ಖಾನ್ ಅವರನ್ನು ದೇಶದ್ರೋಹಿ ಎಂದು ಕರೆಯುತ್ತಿದ್ದೇನೆ. ಏಕೆಂದರೆ ಅವರಿಗೆ ಭಾರತ ಎಲ್ಲಾ ಕೊಟ್ಟಿದೆ. ಭಾರತದ ಜನರು ಕೊಟ್ಟಿದ್ದಾರೆ, ಆದರೆ ಅವರು ಈ ಹಣವನ್ನು ಎಲ್ಲಿ ಹೂಡಿಕೆ ಮಾಡ್ತಿದ್ದಾರೆ? ಭಾರತದ ವಿರುದ್ಧ ಕೆಲಸ ಮಾಡುವ ದೇಶದ ಆಟಗಾರರಿಗೆ ಹೂಡಿಕೆ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಶಾರೂಖ್ ಖಾನ್ ಅವರಂತಹವರು ಯಶಸ್ವಿಯಾಗುವುದಿಲ್ಲ ಎಂದು ನಾನು ಹೇಳಬಯಸುತ್ತೇನೆ. ಎಷ್ಟೇ ಕೊಟ್ಟರೂ ಮುಸ್ತಾಫಿಜುರ್ ರೆಹಮಾನ್ ಇಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಆತ ವಿಮಾನ ನಿಲ್ದಾಣದಿಂದ ಹೊರಗೆ ಕಾಲಿಡಲು ಸಾಧ್ಯವಾಗುವುದಿಲ್ಲ. ಶಾರುಖ್ ಖಾನ್ ಅವರಂತಹವರು ದೇಶದ್ರೋಹಿಗಳು. ಅವರು ಭಾರತದಲ್ಲಿ ತಿನ್ನುತ್ತಾರೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಹಾಡಿ ಹೊಗಳುತ್ತಾರೆ ಎಂದು ಕಿಡಿಕಾರಿದರು.
ಐಪಿಎಲ್‌ಗಾಗಿ ತನ್ನ ಸಹ-ಮಾಲೀಕತ್ವದ ಕೆಕೆಆರ್ ತಂಡದಲ್ಲಿ ಬಾಂಗ್ಲಾದೇಶದ ಆಟಗಾರನನ್ನು ಸೇರಿಸಿಕೊಳ್ಳುವುದರ ಕುರಿತು ಶಾರುಖ್ ಖಾನ್ ಅವರನ್ನು ದೇವಕಿನಂದನ್ ಠಾಕೂರ್ ಟೀಕಿಸಿದ ನಂತರ ಸೋಮ್ ಅವರ ಹೇಳಿಕೆಗಳು ಬಂದವು. ಅವರು ಬಾಲಿವುಡ್ ನಟ ಮತ್ತು ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಆಡಳಿತದ ವಿರುದ್ಧ ತೀಕ್ಷ್ಣವಾದ ಕಾಮೆಂಟ್ಗಳನ್ನು ಕಳುಹಿಸಿದ್ದಾರೆ. ANI ಜೊತೆ ಮಾತನಾಡಿದ ದೇವಕಿನಂದನ್ ಠಾಕೂರ್, ಬಾಂಗ್ಲಾದೇಶದಲ್ಲಿ ಹಿಂದೂಗಳು ತೀವ್ರ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಐಪಿಎಲ್ 2026ಕ್ಕಾಗಿ ಕೆಕೆಆರ್ ತಂಡದ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಗೆ 9.20 ಕೋಟಿ ರೂ ನೀಡಿ ಖರೀದಿಸಿದ ಬೆನ್ನಲ್ಲೇ ಹಿಂದೂ ಧರ್ಮಗುರು ಜಗದ್ಗುರು ರಾಮಭದ್ರಾಚಾರ್ಯ ಶಾರೂಕ್ ಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದಾದ ನಂತರ ಇದೀಗ ಬಿಜೆಪಿ ನಾಯಕರು ಶಾರೂಕ್ ಖಾನ್ ವಿರುದ್ಧ ತಿರುಗಿಬಿದಿದ್ದಾರೆ.
Advertisement