ಬರೋಬ್ಬರಿ 10 ಕೋಟಿ ರೂ. ಲಂಚ: ಗುಜರಾತ್ ಐಎಎಸ್ ಅಧಿಕಾರಿಯನ್ನು ಬಂಧಿಸಿದ ED
ಅಹಮದಾಬಾದ್: ಲಂಚಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ED) ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯ ಮಾಜಿ ಕಲೆಕ್ಟರ್ ಮತ್ತು ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್ ಪಟೇಲ್ ಅವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಭೂ ಪರಿವರ್ತನೆಗೆ ಪ್ರತಿ ಚದರ ಮೀಟರ್‌ಗೆ ಲಂಚವನ್ನು ನಿಗದಿಪಡಿಸಿ, ಅದನ್ನು ಕೈಬರಹ ಮತ್ತು ಡಿಜಿಟಲ್ ಫೈಲ್‌ಗಳಲ್ಲಿ ಲೆಕ್ಕಹಾಕಿ 10 ಕೋಟಿ ಪಡೆದ ಹಗರಣದಲ್ಲಿ ಐಎಎಸ್ ಅಧಿಕಾರಿ ಪಟೇಲ್ ಪಾತ್ರದ ಬಗ್ಗೆ ಕೇಂದ್ರ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.
ಈ ಪ್ರಕರಣ ಸಂಬಂಧ 2015 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಪಟೇಲ್ ಅವರನ್ನು ಯಾವುದೇ ಪೋಸ್ಟ್ ನೀಡದೆ ವರ್ಗಾಯಿಸಿದ ಕೇವಲ ಒಂದು ವಾರದ ನಂತರ ಅವರನ್ನು ಬಂಧಿಸಲಾಗಿದೆ.
ಉಪ ಮಮ್ಲತ್‌ದಾರ್ (ಕಂದಾಯ ಅಧಿಕಾರಿ) ಚಂದ್ರಸಿಂಹ ಭೂಪತ್ಸಿಂಹ ಮೋರಿ ಅವರನ್ನು ಸೌರಾಷ್ಟ್ರ ಘರ್ಖೇಡ್ ಟೆನೆನ್ಸಿ ಸೆಟಲ್‌ಮೆಂಟ್ ಮತ್ತು ಕೃಷಿ ಭೂಮಿ ಸುಗ್ರೀವಾಜ್ಞೆ, 1949 ರ ಅಡಿಯಲ್ಲಿ ಭೂಮಿ ಪರಿವರ್ತನೆಗೆ ಅನುಮೋದನೆ ನೀಡುವ ಜವಾಬ್ದಾರಿ ವಹಿಸಲಾಗಿತ್ತು.
ED ಪ್ರಕಾರ, ಮೋರಿ ತ್ವರಿತ ಅನುಮೋದನೆಗಾಗಿ ಲಂಚಕ್ಕೆ ಬೇಡಿಕೆಯಿಡುವ ಮೂಲಕ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಪ್ರತಿ ಚದರ ಮೀಟರ್ ಭೂಮಿಗೆ ಲಂಚ ನಿಗದಿ ಮಾಡಲಾಗಿದೆ. ಡಿಸೆಂಬರ್ 23 ರಂದು ಮೋರಿಯವರ ನಿವಾಸದ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ, ತನಿಖಾಧಿಕಾರಿಗಳು ಹಾಸಿಗೆಯೊಳಗೆ ಅಡಗಿಸಿಟ್ಟಿದ್ದ 67.50 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದರು.
ಪಿಎಂಎಲ್‌ಎ ಸೆಕ್ಷನ್ 17 ರ ಅಡಿಯಲ್ಲಿ ದಾಖಲಿಸಲಾದ ಹೇಳಿಕೆಯಲ್ಲಿ, ಆ ನಗದು, ಲಂಚದ ಹಣ ಎಂದು ಮೋರಿ ಒಪ್ಪಿಕೊಂಡರು ಮತ್ತು ಹಣ ಹಂಚಿಕೆ ಸೂತ್ರವನ್ನು ಬಹಿರಂಗಪಡಿಸಿದರು. "ಲಂಚದ ಶೇ. 50 ರಷ್ಟು ಹಣವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ" ಎಂದು ಅವರು ತನಿಖಾಧಿಕಾರಿಗಳಿಗೆ ತಿಳಿಸಿದರು. ಆ ಹಣದಲ್ಲಿ ಶೇ. 10 ಹಣವನ್ನು ತಮ್ಮ ಬಳಿ ಇಟ್ಟುಕೊಂಡಿದ್ದು, ಉಳಿದ ಹಣವನ್ನು ಹಿರಿಯ ಅಧಿಕಾರಿಗಳಾದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌ಕೆ ಓಜಾ (ಶೇಕಡಾ 25), ಮಾಮ್ಲತ್‌ದಾರ್ ಮಯೂರ್ ಡೇವ್(ಶೇಕಡಾ 10) ಮತ್ತು ಗುಮಾಸ್ತ ಮಯೂರ್ಸಿನ್ಹ್ ಡಿ. ಗೋಹಿಲ್(ಶೇಕಡಾ 5) ನೀಡಲಾಗಿದೆ ಎಂದು ಹೇಳಿದ್ದಾರೆ.
ಕಲೆಕ್ಟರ್ ಡಾ. ರಾಜೇಂದ್ರ ಪಟೇಲ್ ಅವರು ಲಂಚದ ಹಣದ ಪ್ರಮುಖ ಫಲಾನುಭವಿ ಎಂದು ಮೋರಿ ಹೇಳಿದ್ದು, ಕಲೆಕ್ಟರ್ ಅವರ ಆಪ್ತ ಸಹಾಯಕ ಜಯರಾಜ್‌ಸಿನ್ಹ್ ಝಾಲಾ ಅವರು ಕಲೆಕ್ಟರ್ ಪಾಲನ್ನು ಭೌತಿಕವಾಗಿ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

