

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು NCP ಮುಖ್ಯಸ್ಥ ಅಜಿತ್ ಪವಾರ್ ಅವರು ಇತ್ತೀಚೆಗೆ ಕೇಸರಿ ಪಕ್ಷದ ವಿರುದ್ಧ ನೀಡಿದ್ದ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ, ಆರೋಪಗಳನ್ನು ಮಾಡುವ ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದೆ.
ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅಜಿತ್ ಪವಾರ್ ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ಚವಾಣ್, ಪವಾರ್ ಅವರು ಅಂತಹ ಹೇಳಿಕೆಗಳನ್ನು ನೀಡುವಾಗ ಅವರು ಯಾವ ಪಕ್ಷವನ್ನು ಉಲ್ಲೇಖಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಬೇಕು ಎಂದರು.
ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಿಜೆಪಿ ಅಧಿಕಾರಾವಧಿಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಪಾಲಿಕೆಯ ಖಜಾನೆ ಬರಿದಾಗಿದೆ ಎಂದು ಅಜಿತ್ ಪವಾರ್ ಆರೋಪಿಸಿದ್ದಾರೆ.
"ಅಜಿತ್ ಪವಾರ್ ಅವರು ಚುನಾವಣೆಯ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಆದರೆ ಅವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ಅವರು ಯಾವ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದನ್ನು ಹೇಳಬೇಕು. ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪಕ್ಷವನ್ನು ಉಲ್ಲೇಖಿಸುತ್ತಿದ್ದಾರೆಯೇ?" ಎಂದು ಪ್ರಶ್ನಿಸಿದರು.
ಆರೋಪ ಪ್ರತ್ಯಾರೋಪ ರಾಜಕೀಯದಲ್ಲಿ ತೊಡಗಿಸಿಕೊಳ್ಳದಂತೆ ಅಜಿತ್ ಪವಾರ್ ಅವರಿಗೆ ಎಚ್ಚರಿಕೆ ನೀಡಿದ ರವೀಂದ್ರ ಚವಾಣ್, ಅವರು ಹೀಗೆ ಮಾಡಿದ್ರೆ ತೊಂದರೆಗೆ ಸಿಲುಕುತ್ತಾರೆ ಎಂದು ಹೇಳಿದರು.
"ಆರೋಪ, ಪ್ರತ್ಯಾರೋಪಗಳನ್ನು ಹೇಗೆ ಮಾಡಬೇಕೆಂಬುದನ್ನು ಅಜಿತ್ ಪವಾರ್ ನಿರ್ಧರಿಸಬೇಕಾಗುತ್ತದೆ. ನಾವು ಅದೇ ರೀತಿ ಮಾಡಲು ಪ್ರಾರಂಭಿಸಿದರೆ, ಅದು ಅವರಿಗೆ ಬಹಳಷ್ಟು ತೊಂದರೆ ಉಂಟುಮಾಡುತ್ತದೆ ಮತ್ತು ಅವರು ಅದನ್ನು ಗಮನದಲ್ಲಿಟ್ಟುಕೊಳ್ಳಬೇಕು" ಎಂದು ಚವಾಣ್ ಹೇಳಿದ್ದಾರೆ.
"ದೇವೇಂದ್ರ ಫಡ್ನವೀಸ್ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ನಾಯಕತ್ವವನ್ನು ಅಜಿತ್ ಪವಾರ್ ಅನುಮಾನಿಸುತ್ತಿದ್ದಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು?" ಎಂದು ಆಗ್ರಹಿಸಿದರು.
ಪುಣೆ ಮಹಾನಗರ ಪಾಲಿಕೆ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಸಿಪಿ ನಡುವಿನ ರಾಜಕೀಯ ಸಂಘರ್ಷ ತೀವ್ರಗೊಳ್ಳುತ್ತಿರುವ ಮಧ್ಯೆ ಈ ಹೇಳಿಕೆಗಳು ಬಂದಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಎರಡೂ ಪಕ್ಷಗಳು ಮಿತ್ರಪಕ್ಷಗಳಾಗಿದ್ದರೂ, ಅವು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ಇದು ಸ್ಥಳೀಯ ಮಟ್ಟದಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
Advertisement