

ನವದೆಹಲಿ : ವಯನಾಡ್ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೆಹಾನ್ ವಾದ್ರಾ ಅವರು ತಮ್ಮ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಗಾಂಧಿ-ವಾದ್ರಾ ಕುಟುಂಬ ಮಂಗಳವಾರ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ರಣಥಂಬೋರ್‌ಗೆ ಆಗಮಿಸಿತು. ರೆಹಾನ್ ವಾದ್ರಾ ಮತ್ತು ಅವಿವಾ ಹುಲಿ ಸಫಾರಿ ಮತ್ತು ದೃಶ್ಯವೀಕ್ಷಣಾ ಪ್ರವಾಸಗಳಿಗೆ ತೆರಳಿದರು.
ಇಬ್ಬರೂ ಕ್ಯಾಪ್ ಧರಿಸಿ ಕಾಣಿಸಿಕೊಂಡರು. ಕುಟುಂಬವು ನಾಲ್ಕು ದಿನಗಳ ಕಾಲ ರಣಥಂಬೋರ್‌ನಲ್ಲಿ ತಂಗಿತ್ತು. ಅಲ್ಲಿಯೇ ಇವರ ನಿಶ್ಚಿತಾರ್ಥ ನಡೆದಿದೆ ಎನ್ನಲಾಗಿದೆ. ಅವಿವಾ ಬೇಗ್ ಜತೆಗಿನ ನಿಶ್ಚಿತಾರ್ಥದ ಫೋಟೊಗಳನ್ನು ರೆಹನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ, ಡಿಸೆಂಬರ್ 29, 2025 ರಂದು ತಮ್ಮ ನಿಶ್ಚಿತಾರ್ಥವನ್ನು ಅಧಿಕೃತವಾಗಿ ಘೋಷಿಸಿದರು. ಇದರ ನಡುವೆ ಉದ್ಯಮಿ ರಾಬರ್ಟ್ ವಾದ್ರಾ ತಮ್ಮ ಮಗ ರೆಹಾನ್ ನಿಶ್ಚಿತಾರ್ಥದ ಫೋಟೋವನ್ನು ಪೋಸ್ಟ್ ಮಾಡಿ ಬರೆದುಕೊಂಡಿದ್ದು, 'ನನ್ನ ಮಗ ಬೆಳೆದು ದೊಡ್ಡವನಾಗಿದ್ದಾನೆ, ಜೀವನ ಸಂಗಾತಿ ಸಿಕ್ಕಿದ್ದಾಳೆ. ರೆಹಾನ್ ಯಾವಾಗಲೂ ಸಂತೋಷವಾಗಿರಲಿ' ಎಂದು ಬರೆದುಕೊಂಡಿದ್ದಾರೆ.
ನಿಶ್ಚಿತಾರ್ಥದ ವೇಳೆ ರೆಹನ್, ಕ್ಲಾಸಿ ಸೂಟ್ ಧರಿಸಿ ಮಿಂಚಿದ್ದರೆ, ಅವಿವಾ ನೇರಳೆ ಬಣ್ಣದ ಸೀರೆಯನ್ನು ಧರಿಸಿ ಕಂಗೊಳಿಸಿದ್ದಾರೆ. ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುತ್ತೇನೆ. ನೀವು ಯಾವಾಗಲೂ ಒಬ್ಬರನ್ನೊಬ್ಬರು ಪ್ರೀತಿಸಿ ಮತ್ತು ಗೌರವಿಸಿ ಎಂದು ಪ್ರಿಯಾಂಕಾ ಗಾಂಧಿ ಶುಭ ಹಾರೈಸಿದ್ದಾರೆ.
ಮೂಲಗಳ ಪ್ರಕಾರ, ರೆಹನ್ ಮತ್ತು ಅವಿವಾ ಕಳೆದ 7 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದು, ಅದಕ್ಕೆ ಅವರೂ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಅವಿವಾ ಮಾಧ್ಯಮ ಮತ್ತು ಸಂವಹನ ವಲಯದಲ್ಲಿ ಕೆಲಸ ಮಾಡಿದ್ದಾರೆ. ಅವರು ಕಂಟೆಂಟ್ ಫ್ಲಾಟ್‌ಫಾರ್ಮ್ ಪ್ರೊಪಗಂಡದಲ್ಲಿ ಜೂನಿಯರ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಮತ್ತು ಡಿಜಿಟಲ್ ಕಂಟೆಂಟ್ ವೇದಿಕೆ ಆರ್ಟ್ ಚೈನ್ ಇಂಡಿಯಾದಲ್ಲಿ ಮಾರ್ಕೆಟಿಂಗ್ ಇಂಟರ್ನ್ ಆಗಿ ಸೇವೆ ಸಲ್ಲಿಸಿದ್ದಾರೆ.
Advertisement