

ತಿರುವನಂತಪುರ: ತಿರುವನಂತಪುರಂ ಮೇಯರ್ ಹುದ್ದೆಯಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಸಸ್ತಮಂಗಲದ ಬಿಜೆಪಿ ಕೌನ್ಸಿಲರ್ ಆರ್. ಶ್ರೀಲೇಖಾ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆನ್ ಲೈನ್ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಕೇರಳದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿಯ ರಾಜ್ಯ ಉಪಾಧ್ಯಕ್ಷೆ ಶ್ರೀಲೇಖಾ, ಆರಂಭದಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂಜರಿದಿದ್ದೆ. ಆದರೆ ಮೇಯರ್ ಹುದ್ದೆಯ ಭರವಸೆ ನೀಡಿ ಪಕ್ಷವು ನನ್ನನ್ನು ಕಣಕ್ಕಿಳಿಸಿತ್ತು, ನಾನು ಕೌನ್ಸಿಲರ್ ಆಗಿ ಇರುವುದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಬಿಜೆಪಿ ಕೇಂದ್ರ ನಾಯಕರು ವಿ.ವಿ. ರಾಜೇಶ್ ಮತ್ತು ಆಶಾ ನಾಥ್ ಜಿ.ಎಸ್. ಅವರನ್ನು ಕ್ರಮವಾಗಿ ಮೇಯರ್ ಮತ್ತು ಉಪ ಮೇಯರ್ ಆಗಿ ಆಯ್ಕೆ ಮಾಡಿದ್ದಾರೆ ಎಂದು ಶ್ರೀಲೇಖಾ ಹೇಳಿದರು, ಏಕೆಂದರೆ ಇಬ್ಬರೂ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂದು ಅವರು ನಂಬಿದ್ದಾರೆ. "ರಾಜಕೀಯಕ್ಕೆ ಬಂದಾಗ, ಪ್ರತಿಯೊಬ್ಬ ವ್ಯಕ್ತಿಯ ಹಿತಾಸಕ್ತಿಗಳನ್ನು ಆಧರಿಸಿ ಆಯ್ಕೆಗಳು ಬದಲಾಗಬಹುದು" ಎಂದು ಅವರು ಹೇಳಿದರು.
ಕೇಂದ್ರ ನಾಯಕತ್ವವು ಒಮ್ಮೆ ನಿರ್ಧಾರ ತೆಗೆದುಕೊಂಡರೆ, ತನ್ನ ಜವಾಬ್ದಾರಿಯನ್ನು ಬಿಟ್ಟು ಹೊರನಡೆಯುವ ಮೂಲಕ ಅದನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ಶ್ರೀಲೇಖಾ ಹೇಳಿದರು. "ನನ್ನನ್ನು ಆಯ್ಕೆ ಮಾಡಿದವರು ಅನೇಕರಿದ್ದಾರೆ. ಅವರ ಮೇಲಿನ ನನ್ನ ನಿಷ್ಠೆಯಿಂದಾಗಿ ಮುಂದಿನ ಐದು ವರ್ಷಗಳ ಕಾಲ ಕೌನ್ಸಿಲರ್ ಆಗಿ ಮುಂದುವರಿಯಲು ನಾನು ನಿರ್ಧರಿಸಿದ್ದೇನೆ" ಎಂದು ಅವರು ಹೇಳಿದರು.
ರಾಜೇಶ್ ಅವರ ಪ್ರಮಾಣವಚನ ಸಮಾರಂಭವನ್ನು ವೈಯಕ್ತಿಕ ಕಾರಣಗಳನ್ನು ನೀಡಿ ಅರ್ಧಕ್ಕೆ ಬಿಟ್ಟು ಹೋದಾಗ, ಮೇಯರ್ ಹುದ್ದೆಗೆ ತಮ್ಮನ್ನು ಕೈಬಿಟ್ಟಿದ್ದಕ್ಕೆ ಶ್ರೀಲೇಖಾ ಅವರ ಅಸಮಾಧಾನ ಬೆಳಕಿಗೆ ಬಂದಿತ್ತು.
ಸಸ್ತಮಂಗಲದಲ್ಲಿರುವ ಕಾರ್ಪೊರೇಷನ್ ವಲಯದಲ್ಲಿ ಕಚೇರಿ ಸ್ಥಳ ಹಂಚಿಕೆ ವಿಚಾರದಲ್ಲಿ ವಟ್ಟಿಯೂರ್ಕಾವು ಶಾಸಕ ವಿ.ಕೆ. ಪ್ರಶಾಂತ್ ಅವರೊಂದಿಗೆ ಮಾಜಿ ಐಪಿಎಸ್ ಅಧಿಕಾರಿ ಸಾರ್ವಜನಿಕವಾಗಿ ಜಗಳವಾಡಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆರ್. ಶ್ರೀಲೇಖಾ ಅವರು ಪ್ರತಿಸ್ಪರ್ಧಿಯನ್ನು ಸುಮಾರು 700 ಮತಗಳ ಅಂತರದಿಂದ ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. 1987ರ ಬ್ಯಾಚ್ ನ ಕೇರಳ ಕೇಡರ್ IPS ಅಧಿಕಾರಿ ಆಗಿದ್ದ ಅವರು ಸಸ್ತಮಂಗಲಂ ವಾರ್ಡ್‌ನಿಂದ ಆಯ್ಕೆಯಾಗಿದ್ದಾರೆ.
Advertisement