ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿ ವಿವಾದ: ಮಮತಾಗೆ ತಳಮಳ (ನೇರ ನೋಟ)

ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ವಿಧಾನಸಭಾ ಕ್ಷೇತ್ರಗಳು. ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ಅಸೆಂಬ್ಲಿ ಚುನಾವಣೆ. ಅಲ್ಲೀಗ ಚುನಾವಣಾ ರಾಜಕಾರಣದ ಮೇಲಾಟ.
Mamata Banerjee- Babri Masjid dispute
ಮಮತಾ ಬ್ಯಾನರ್ಜಿ- ಬಾಬ್ರಿ ಮಸೀದಿonline desk
Updated on

ಉತ್ತರ ಪ್ರದೇಶದ ಅಯೋಧ್ಯೆ ಎಲ್ಲಿ? ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಎಲ್ಲಿ? ಅಯೋಧ್ಯೆಯ ರಾಮಮಂದಿರ - ಬಾಬ್ರಿ ಮಸೀದಿಯ ಒಂದು ಕಾಲದ ವಿವಾದ ದೂರದ ಮುರ್ಷಿದಾಬಾದ್‌ ನಲ್ಲಿ ಈಗ ಸದ್ದು ಮಾಡಿದೆ. ಪಶ್ಚಿಮ ಬಂಗಾಳದ ರಾಜಕೀಯ ಚಿತ್ರಣವನ್ನೇ ಬದಲಿಸಲು ಹೊರಟಿದೆ. ತಮ್ಮದೇ ಪಕ್ಷದ ಶಾಸಕರೊಬ್ಬರು ಒಡ್ಡಿರುವ ಸವಾಲಿನಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಈಗ ತಳಮಳ ಶುರುವಾಗಿದೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು 294 ವಿಧಾನಸಭಾ ಕ್ಷೇತ್ರಗಳು. ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ ಅಸೆಂಬ್ಲಿ ಚುನಾವಣೆ. ಅಲ್ಲೀಗ ಚುನಾವಣಾ ರಾಜಕಾರಣದ ಮೇಲಾಟ. ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿ ನಾಲ್ಕನೇ ಬಾರಿಯೂ ವಿಜಯೋತ್ಸವ ಆಚರಿಸಲು ಕಸರತ್ತು ನಡೆಸಿದ್ದಾರೆ. ಈ ಸಂದರ್ಭದಲ್ಲೇ ಅವರಿಗೆ ಹೊಸ ಸವಾಲು ಎದುರಾಗಿದೆ.

ತೃಣಮೂಲ ಕಾಂಗ್ರೆಸ್ಸಿನ ಭರತ್‌ಪುರ ಶಾಸಕ ಹುಮಾಯೂನ್‌ ಕಬೀರ್‌. ಅಯೋಧ್ಯೆ ಬಾಬ್ರಿ ಮಸೀದಿಯ ಪ್ರತಿರೂಪದಲ್ಲೇ ಮುರ್ಷಿದಾಬಾದ್‌ ಜಿಲ್ಲೆಯ ಬೆಲದಂಗದಲ್ಲಿ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಬಾಬ್ರಿ ಮಸೀದಿ ಧ್ವಂಸಗೊಂಡ ಡಿಸೆಂಬರ್‌ 6 ರಂದೇ ಶಿಲಾನ್ಯಾಸ ನಡೆದಿರುವುದು ಗಮನಾರ್ಹ. ಮಸೀದಿ ಆವರಣದಲ್ಲಿ ಆಸ್ಪತ್ರೆ ಕೂಡ ನಿರ್ಮಾಣ ಆಗಲಿದೆ. ಇದು 300 ಕೋಟಿ ರೂಪಾಯಿ ವೆಚ್ಚದ ಯೋಜನೆ ಎಂಬುದು ಕಬೀರ್‌ ಅವರ ವಿವರಣೆ.

ಹುಮಾಯೂನ್‌ ಕಬೀರ್‌ ಅವರ ಈ ನಡೆಯನ್ನು ಮಮತಾ ಬ್ಯಾನರ್ಜಿ ವಿರೋಧಿಸಿದ್ದಾರೆ. ಪಕ್ಷದಿಂದ ಅವರನ್ನು ಸಸ್ಪೆಂಡ್‌ ಮಾಡಿದ್ದಾರೆ. ಆದರೆ, ಹುಮಾಯೂನ್‌ ಸುಮ್ಮನಾಗಿಲ್ಲ. ತಮ್ಮದೇ ಹೊಸ ಪಕ್ಷ ಜನ್ನಾತಾರ್‌ ಉನ್ನಾಯನ್‌ ಪಾರ್ಟಿ ( ಜೆಯುಪಿ) ಹುಟ್ಟು ಹಾಕಿದ್ದಾರೆ. ತಮ್ಮ ಪಕ್ಷದ ಅಸ್ತಿತ್ವದ ದಿನವೇ ಎಂಟು ಅಭ್ಯರ್ಥಿಗಳ ಹೆಸರನ್ನೂ ಘೋಷಿಸಿದ್ದಾರೆ. ರಾಜ್ಯದ 135 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಹೂಡುವ ಉದ್ದೇಶ ಅವರದು.

ಹೈದರಾಬಾದಿನ ಸಂಸದ ಅಸಾದುದ್ದೀನ್‌ ಓವೈಸಿ ಹಾಗೂ ಹುಮಾಯೂನ್‌ ಕಬೀರ್ ಅವರ ಪಕ್ಷಗಳ ಮಧ್ಯೆ ಸ್ಥಾನ ಹೊಂದಾಣಿಕೆಯ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ಶೇ.27ರಷ್ಟು ಮುಸ್ಲಿಂ ಮತದಾರರಿದ್ದಾರೆ. ಸುಮಾರು 50 ಅಸೆಂಬ್ಲಿ ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯವಿದೆ. ಸುಮಾರು 80 ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಕಳೆದ 2011 ರಿಂದಲೂ ಮುಸ್ಲಿಂಮರು ಮಮತಾ ಅವರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಮಮತಾ ಅವರಿಗೆ ಈಗ ತಳಮಳ.

ಮುರ್ಷಿದಾಬಾದಿನ ಬೆಲದಂಗದಲ್ಲಿ ಬಾಬ್ರಿ ಮಸೀದಿಯ ಪ್ರತಿರೂಪ ನಿರ್ಮಿಸಲು ಹುಮಾಯೂನ್‌ ನೇತೃತ್ವದಲ್ಲಿ ಶಿಲಾನ್ಯಾಸ ನಡೆಯುತ್ತಿದ್ದಂತೆ ಇತ್ತ ಇದೇ ಜಿಲ್ಲೆಯ ಬಿಜೆಪಿ ನಾಯಕರು ಅಯೋಧ್ಯೆಯ ರಾಮಮಂದಿರದ ಪ್ರತಿರೂಪದಂತೆಯೇ ಮುರ್ಷಿದಾಬಾದ್‌ ಜಿಲ್ಲೆಯ ಬೆಹ್ರಾಂಪುರದಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಶಿಲಾ ಪ್ರತಿಷ್ಠಾನ ಕಾರ್ಯವನ್ನೂ ನಡೆಸಿದ್ದಾರೆ. ಇದಕ್ಕಾಗಿ ಟ್ರಸ್ಟ್‌ ರಚನೆಯಾಗಿದೆ. ದೇವಸ್ಥಾನದ ಆವರಣದಲ್ಲಿ ಆಸ್ಪತ್ರೆ ಮತ್ತು ಶಾಲೆ ನಿರ್ಮಾಣವಾಗಲಿದೆ.

ಮಮತಾ ಬ್ಯಾನರ್ಜಿ ಅವರಿಗೆ ಒಂದು ಕಡೆ ಚುನಾವಣೆಯಲ್ಲಿ ಮುಸ್ಲಿಂ ಮತಗಳು ವಿಭಜನೆಯಾಗುವ ಅಪಾಯ. ಮತ್ತೊಂದು ಕಡೆ ಬಾಬ್ರಿ ಮಸೀದಿಯ ಪ್ರತಿರೂಪದ ನಿರ್ಮಾಣದಿಂದ ಹಿಂದೂಗಳ ಮತಗಳು ಕ್ರೂಢೀಕರಣವಾಗುತ್ತಿರುವ ಆತಂಕ. ಈ ವಿವಾದ ಪಶ್ಚಿಮ ಬಂಗಾಳದ ರಾಜಕೀಯ ಸಮೀಕರಣವನ್ನೇ ಬದಲಿಸುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಹೀಗಾಗಿ, ಈ ಚುನಾವಣೆ ಅವರಿಗೆ ಹೊಸ ಸವಾಲು.

ಮುರ್ಷಿದಾಬಾದ್‌ ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆ. ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳು ಬಾಂಗ್ಲಾ ದೇಶದ ಗಡಿಯನ್ನು ಹಂಚಿಕೊಂಡಿವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವು ಪಶ್ಚಿಮ ಬಂಗಾಳದ ಚುನಾವಣೆ ಮೇಲೆ ಪರಿಣಾಮ ಬೀರಬಹುದು. ಪಶ್ಚಿಮ ಬಂಗಾಳ ಈವರೆಗೂ ಸ್ಪರ್ಧಾತ್ಮಕ ಧಾರ್ಮಿಕ ರಾಜಕಾರಣವನ್ನು ಒಪ್ಪಿಲ್ಲ. ಆದರೆ, ಈ ಬಾರಿ ಧರ್ಮ ಆಧರಿತ ಧ್ರುವೀಕರಣದತ್ತ ರಾಜಕಾರಣ ಹೊರಟಿರುವುದು ಮಮತಾ ಅವರ ಕಳವಳಕ್ಕೆ ಕಾರಣ.

Mamata Banerjee- Babri Masjid dispute
ಕೇರಳದಲ್ಲಿ ಕುಸಿಯುತ್ತಿರುವ ಕಮ್ಯುನಿಸ್ಟರ ಕೋಟೆ (ನೇರ ನೋಟ)

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್‌ ಭಾಗವತ್‌ ಅವರು ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಕೆಲವರು ಮುಂದಾಗಿರುವುದನ್ನು ವಿರೋಧಿಸಿದ್ದಾರೆ. ಬಾಬರಿ ಮಸೀದಿ ನಿರ್ಮಾಣದಿಂದ ಹಿಂದೂ ಅಥವಾ ಮುಸ್ಲಿಂ ಯಾರಿಗೂ ಒಳಿತಾಗುವುದಿಲ್ಲ. ಇದು ಚುನಾವಣೆಯಲ್ಲಿ ವೋಟಿಗಾಗಿ ನಡೆಸಿರುವ ರಾಜಕೀಯ ತಂತ್ರ. ಇದು ಸರಿಯಲ್ಲ ಎಂದು ಟೀಕಿಸಿದ್ದಾರೆ. ಮಮತಾ ಬ್ಯಾನರ್ಜಿ ಮುಸ್ಲಿಮರ ಮತಗಳ ಕ್ರೂಡೀಕರಣಕ್ಕಾಗಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆಂದು ಹಿಂದೂ ಸಂಘಟನೆಗಳು ಆರೋಪಿಸಿವೆ.

ಸ್ವಾತಂತ್ರ್ಯ ನಂತರ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಸಮುದಾಯವು ಕಾಂಗ್ರೆಸ್‌ ಬೆಂಬಲಿಸುತ್ತಾ ಬಂದಿತ್ತು. ನಂತರ ಅಲ್ಪಸಂಖ್ಯಾತರು ಕಾಂಗ್ರೆಸ್‌ ನಿಂದ ವಿಭಜನೆಯಾಗಿ ರಚನೆಯಾದ ಬಂಗಾಳ ಕಾಂಗ್ರೆಸ್ಸಿಗೆ ಒಲಿದರು. ನಂತರ 1977 ರಿಂದ ವಾಮಪಕ್ಷಗಳಿಗೆ ಮಣೆ ಹಾಕಿದರು. ಕಳೆದ ಮೂರು ವಿಧಾನಸಭಾ ಚುನಾವಣೆಗಳಿಂದ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸಿದ್ದಾರೆ. ಮಮತಾ ಅವರಿಗೆ ಕಳೆದ ಚುನಾವಣೆಯಿಂದ ಬಿಜೆಪಿ ನೇರ ಎದುರಾಳಿ.

ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ 2011ರಲ್ಲಿ 67 ಇತ್ತು. 2016ರಲ್ಲಿ ಇದು 57 ಆಯಿತು. 2021 ರಲ್ಲಿ ಇದು 44ಕ್ಕೆ ಇಳಿದಿದೆ. ಇದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗ್ರಾಫ್‌ ಏರುತ್ತಿರುವ ಒಂದು ಸೂಚನೆ.

ಕಮ್ಯುನಿಸ್ಟರು 34 ವರ್ಷಗಳ ಕಾಲ ಅಧಿಕಾರ ನಡೆಸಿದ ಈ ರಾಜ್ಯದಲ್ಲಿ ಈಗ ಧರ್ಮ ಆಧರಿತ ಚುನಾವಣೆಗೆ ಅಜೆಂಡಾ ಸಿದ್ದವಾಗುತ್ತಿದೆ. ಇದು ಪಶ್ಚಿಮ ಬಂಗಾಳದ ಹೊಸ ರಾಜಕಾರಣ. ಇದಕ್ಕೆ ಮಮತಾ ಬ್ಯಾನರ್ಜಿ ಸರಕಾರದ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯದ ಕೊಡುಗೆಯೂ ಅಪಾರ. ಜೊತೆಯಲ್ಲಿ ಮಮತಾ ಸರಕಾರದ ಹಗರಣಗಳ ಸರಮಾಲೆ.

ಮಮತಾ ಬ್ಯಾನರ್ಜಿ ಅವರು ಹೋರಾಟದ ಮೂಲಕ ಮಾಸ್‌ ಲೀಡರ್‌ ಆಗಿ ಹೊರಹೊಮ್ಮಿದವರು. ಅವರು ಕಾಂಗ್ರೆಸ್‌ ನಿಂದ ಸಿಡಿದು ನೂತನ ಪಕ್ಷ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ರಚಿಸಿದ್ದು 01 ಜನವರಿ 1998ರಲ್ಲಿ. ಜನಪರ ಚಳವಳಿಯ ಮೂಲಕ ಬೇರುಮಟ್ಟದಿಂದ ಪಕ್ಷ ಕಟ್ಟಿದರು. ಮಮತಾ ಬ್ಯಾನರ್ಜಿ ಕಾಂಗ್ರೆಸ್‌ನಲ್ಲಿದ್ದಾಗ ಅವರನ್ನು ರಾಜಕಾರಣದಲ್ಲಿ ಹೋರಾಟದ ಗುಣಗಳಿಂದಾಗಿ ಬಂಗಾಳದ ಅಗ್ನಿಕನ್ಯೆ ಎಂದು ಕರೆಯುತ್ತಿದ್ದುದು ಉಂಟು.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ ಅವರ ಪಕ್ಷ ಗಟ್ಟಿಯಾಗಿ ತಳವೂರಿತು. ಮಮತಾ ಕಮ್ಯುನಿಸ್ಟ್‌ ಆಡಳಿತಕ್ಕೆ ಸಡ್ಡು ಹೊಡೆದರು. ಪಶ್ಚಿಮ ಬಂಗಾಳದಲ್ಲಿ 2011ರಲ್ಲಿ ನಡೆದ ಚುನಾವಣೆಯಲ್ಲಿ ಮಮತಾ ಮೊದಲ ಬಾರಿಗೆ ಅಧಿಕಾರಕ್ಕೆ ಬಂದರು. 2016 ಹಾಗೂ 2021ರಲ್ಲೂ ಅವರ ಪಕ್ಷಕ್ಕೇ ವಿಜಯದ ಮಾಲೆ. ಕಳೆದ ಚುನಾವಣೆಯಿಂದ ಬಿಜೆಪಿ ತನ್ನ ನೆಲೆಯನ್ನು ಹಿಗ್ಗಿಸಿಕೊಳ್ಳುತ್ತಿದೆ. ಎಡಪಕ್ಷಗಳು ಹಾಗೂ ಕಾಂಗ್ರೆಸ್‌ ನೆಲಕಚ್ಚಿವೆ.

ಇಂಡಿಯಾ ಒಕ್ಕೂಟದಲ್ಲಿ ಕಾಂಗ್ರೆಸ್‌ ಹಾಗೂ ತೃಣಮೂಲ ಕಾಂಗ್ರೆಸ್‌ ಮಿತ್ರ ಪಕ್ಷಗಳು. ಆದರೆ, ಲೋಕಸಭೆಗೆ 2024ರಲ್ಲಿ ನಡೆದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಒಂದೇ ಒಂದು ಸ್ಥಾನವನ್ನು ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ಸಿಗೆ ಬಿಟ್ಟುಕೊಡಲಿಲ್ಲ. ಎಲ್ಲ 42 ಸ್ಥಾನಗಳಿಗೂ ತೃಣಮೂಲ ಕಾಂಗ್ರೆಸ್‌ ಸ್ಪರ್ಧಿಸಿತು. ಇಂಡಿಯಾ ಒಕ್ಕೂಟವು ದೆಹಲಿಗೆ ಮಾತ್ರ ಸೀಮಿತ. ಪಶ್ಚಿಮ ಬಂಗಾಳಕ್ಕೆ ಅಲ್ಲ ಎಂದು ದೀದಿ ಕಾಂಗ್ರೆಸ್ಸಿಗೆ ಎದಿರೇಟು ನೀಡಿದ್ದರು. ಪಶ್ಚಿಮ ಬಂಗಾಳದ ಅಸೆಂಬ್ಲಿ ಚುನಾವಣೆಯಲ್ಲೂ ಏಕಾಂಗಿ ಹೋರಾಟವನ್ನು ಸಾರಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 2011ರಲ್ಲಿ ನಡೆದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ 184 (ಶೇಕಡಾವಾರು ಮತ ಪ್ರಮಾಣ 38.93), ಕಾಂಗ್ರೆಸ್ 42 (ಶೇ.9.1), ಸಿಪಿಎಂ 40 (ಶೇ.30.1) ಪಡೆದಿತ್ತು. 2016ರ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ 211 ಸ್ಥಾನಗಳನ್ನು ಪಡೆಯಿತು. ಶೇಕಡಾವಾರು ಮತಗಳ ಪ್ರಮಾಣ 45.6. ಕಾಂಗ್ರೆಸ್‌ 44 (ಶೇ.12.4), ಸಿಪಿಐ (ಎಂ) 26 (ಶೇ.20.1.), ಬಿಜೆಪಿ 3 (ಶೇ.10.3) ಸೀಟುಗಳನ್ನು ಹೊಂದಿತ್ತು.

Mamata Banerjee- Babri Masjid dispute
Power Sharing: ಸಿದ್ದರಾಮಯ್ಯ ಅವರನ್ನು ನಿಭಾಯಿಸುವುದೇ ಹೈಕಮಾಂಡ್‌? (ನೇರ ನೋಟ)

ಪಶ್ಚಿಮ ಬಂಗಾಳದಲ್ಲಿ 2021ರ ಅಸೆಂಬ್ಲಿ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ 213 (ಶೇಕಡಾವಾರು ಮತಗಳ ಪ್ರಮಾಣ 48.5) ಸ್ಥಾನಗಳನ್ನು ಪಡೆಯಿತು. ಈ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಕಳೆದ ಬಾರಿಗಿಂತ ಎರಡು ಸ್ಥಾನಗಳನ್ನು ಹೆಚ್ಚಿಗೆ ಪಡೆದರೂ ಗಮನ ಸೆಳೆದಿದ್ದು ಬಿಜೆಪಿ ಸಾಧನೆ.

ಬಿಜೆಪಿ 2016ರ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನ ಪಡೆದಿತ್ತು. ಆದರೆ, 2021ರ ಚುನಾವಣೆಯಲ್ಲಿ ಇದು 77ಕ್ಕೆ (ಶೇಕಡಾವಾರು ಮತಗಳ ಪ್ರಮಾಣ 38.5) ಜಿಗಿಯಿತು. ಸಿಪಿಐ (ಎಂ) ಹಾಗೂ ಕಾಂಗ್ರೆಸ್‌ ಶೂನ್ಯ ಸಂಪಾದಿಸಿತು. ಪಶ್ಚಿಮ ಬಂಗಾಳದಲ್ಲಿ ಈಗ 2026ರ ಚುನಾವಣೆಯ ಹವಾ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com