

ಅಹಮದಾಬಾದ್: ನರಭಕ್ಷಕ ಸಿಂಹವನ್ನು ಸೆರೆಹಿಡಿಯುವ ವಿಫಲ ಯತ್ನದಲ್ಲಿ ಆಕಸ್ಮಿಕವಾಗಿ ಹಾರಿದ ಗುಂಡು ಅರಣ್ಯಾಧಿಕಾರಿಯನ್ನು ಬಲಿಪಡಿದಿರುವ ಘಟನೆ ಗುಜರಾತ್ ನ ಜುನಾಗಢ ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ಬೆಳಗ್ಗೆ ವಲಸೆ ಕಾರ್ಮಿಕರೊಬ್ಬರ ನಾಲ್ಕು ವರ್ಷದ ಬಾಲಕನನ್ನು ಸಿಂಹ ತಿಂದು ಹಾಕಿತ್ತು. ಇದರಿಂದ ನಾನಿ ಮೊನ್‌ಪಾರಿ ಎಂಬ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಮಧ್ಯಾಹ್ನದ ವೇಳೆಗೆ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಇಳಿದಿದೆ.
ಹೊಲವೊಂದರಲ್ಲಿ ಅಡಗಿದ್ದ ಸಿಂಹವನ್ನು ಸೆರೆಯಿಡಿಯಲು 30 ಕ್ಕೂ ಹೆಚ್ಚು ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿ ಪಂಜರವನ್ನು ಇಟ್ಟು ಪ್ರಯತ್ನಿಸಿದ್ದಾರೆ. ಆದರೆ, ಸಿಂಹಿಣಿ ಇದ್ದಕ್ಕಿದ್ದಂತೆ ಪಂಜರದ ಮೇಲೆ ಹತ್ತಿ, ಭಯ ಭೀತಿ ಸೃಷ್ಟಿಸಿದೆ.
ಈ ಸಂದರ್ಭದಲ್ಲಿ ಸಿಂಹದ ಕಡೆಗೆ ಹಾರಿಸಬೇಕಾದ ಗನ್, ಆಕಸ್ಮಿಕವಾಗಿ ಅಲ್ಲಿಯೇ ಇದ್ದ ಅರಣ್ಯಾಧಿಕಾರಿ ಆಶ್ರಫ್ ಖಾನ್ ಅವರತ್ತ ಹಾರಿದೆ. ಸೆಕೆಂಡ್ ಗಳಲ್ಲಿಯೇ ಇದೆಲ್ಲಾ ಮುಗಿದು ಹೋಗಿದೆ.
ಸಿಂಹದತ್ತ ಹೊಡೆಯಲಾದ ಗುಂಡು, ಆಶ್ರಫ್ ಗೆ ತಗುಲಿದೆ ಎಂದು ಘಟನಾ ಸ್ಥಳದಲ್ಲಿದ್ದ ಅರಣ್ಯಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಕ್ಷಣ ಕುಸಿದು ಬಿದ್ದ ಅಶ್ರಫ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ತುರ್ತು ಚಿಕಿತ್ಸೆಗಾಗಿ ವೈಸವಾಡರ್ ನಾಗರಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತದ ನಂತರ ಜುನಾಗಢ ನಾಗರಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಡಾಕ್ಟರ್ ಪ್ರಯತ್ನದ ಹೊರತಾಗಿಯೂ ಅಶ್ರಫ್ ಮೃತಪಟ್ಟಿದ್ದಾರೆ.
ಆಕಸ್ಮಿಕವಾಗಿ ಗುಂಡು ಹಾರಿ ಅರಣ್ಯಾಧಿಕಾರಿಯೊಬ್ಬರು ಸಾವನ್ನಪ್ಪಿರುವುದು ಜಿಲ್ಲೆಯ ಅರಣ್ಯ ಇಲಾಖೆ ಇತಿಹಾಸದಲ್ಲಿ ಮೊದಲನೇಯದು ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement