

ನವದೆಹಲಿ: 2020ರ ದೆಹಲಿ ಗಲಭೆಯಲ್ಲಿ ಪಿತೂರಿ ಆರೋಪ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಉಮರ್ ಖಲಿದ್ ಮತ್ತು ಶಾರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಹಲವು ವಿರೋಧ ಪಕ್ಷದ ನಾಯಕರು ಸೋಮವಾರ ಪ್ರಶ್ನಿಸಿದ್ದಾರೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿಗಳಾದ ಉಮರ್ ಮತ್ತು ಶಾರ್ಜೀಲ್ ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೇಲ್ನೋಟಕ್ಕೆ ಆರೋಪ ನಿಜವೆಂದು ತೋರುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದಾಗ್ಯೂ, ಇತರ ಐವರು ಆರೋಪಿಗಳಾದ ಗುಲ್ಫಿಶಾ ಫಾತಿಮಾ, ಮೀರಾ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ , ಸಲೀಂ ಖಾನ್ ಮತ್ತು ಶಾದಾಬ್ ಅಹಮದ್ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ.
ಸುಪ್ರೀಂ ಕೋರ್ಟ್ ಆದೇಶವನ್ನು 'ಆಘಾತಕಾರಿ' ಎಂದಿರುವ CPI (M) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ, ಐದು ವರ್ಷಗಳಿಂದ ಆರೋಪಿಗಳು ವಿಚಾರಣೆಯಿಲ್ಲದೆ ಜೈಲು ಶಿಕ್ಷೆ ಅನುಭವಿಸುತ್ತಿರುವುದು ಸಾಂವಿಧಾನಿಕ ಅನುಮತಿಯನ್ನು ಮೀರಿಲ್ಲ ಎಂಬ ಆದೇಶವನ್ನು ಪ್ರಶ್ನಿಸಿದ್ದಾರೆ. ನ್ಯಾಯಾಲಯದ ಹೇಳಿಕೆಯು ನ್ಯಾಯದ ವಿಡಂಬನೆಯಾಗಿದೆ. ವಿಚಾರಣೆ ಪ್ರಾರಂಭವಾಗುವ ಸಾಧ್ಯತೆಯಿಲ್ಲದೆ ಐದು ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುವುದು ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಲ್ಲವೇ? ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಶ್ನಿಸಿದ್ದಾರೆ.
ಈ ತೀರ್ಪು ಬಿಜೆಪಿ ಸರ್ಕಾರದ "ಅಭಿಪ್ರಾಯದ ದನಿಗಳನ್ನು ಗುರಿಯಾಗಿಸುವ ದಮನಕಾರಿ ತಂತ್ರಗಳನ್ನು ಪರಿಣಾಮಕಾರಿಯಾಗಿ ಶಕ್ತಗೊಳಿಸುತ್ತದೆ. ಇದೇ ವೇಳೆ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ನ್ಯಾಯಾಲಯವು 15 ನೇ ಬಾರಿಗೆ ಪೆರೋಲ್ ಮಂಜೂರು ಮಾಡಿದೆ. ಇದು ಅವಮಾನಕರ ಮತ್ತು ಸ್ವೀಕಾರಾರ್ಹವಲ್ಲ! ಎಂದಿದ್ದಾರೆ.
CPI ಪ್ರಧಾನ ಕಾರ್ಯದರ್ಶಿ ಡಿ ರಾಜಾ ಮಾತನಾಡಿ, ವಿಚಾರಣೆಯಿಲ್ಲದೆ ಐದು ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಯು ನ್ಯಾಯವಲ್ಲ. ತೀರ್ಪು ಇಲ್ಲದೆ ಶಿಕ್ಷೆಯಾಗಿದೆ. ಜಾಮೀನು ನಿರಾಕರಣೆಯು ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಗೊಂದಲ ಹೆಚ್ಚಾಗಿರುವುದನ್ನು ಬಹಿರಂಗಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. 2014ರಲ್ಲಿ ಯುಎಪಿಎ ಅಡಿಯಲ್ಲಿ ನಕ್ಸಲೀಯರ ನಂಟು ಆರೋಪದ ಮೇಲೆ ಬಂಧಿಸಿ ನಂತರ ಖುಲಾಸೆಗೊಂಡಿದ್ದ ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಮತ್ತು ಸಾಮಾಜಿಕ ಕಾರ್ಯಕರ್ತ ದಿವಂಗತ ಜಿ ಎನ್ ಸಾಯಿಬಾಬಾ ಅವರ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ. CPI(ML) ಲಿಬರೇಶನ್ ಕೂಡಾ ಇದೇ ರೀತಿಯ ಹೇಳಿಕೆ ನೀಡಿದೆ.
ರಾಷ್ಟ್ರೀಯ ಜನತಾ ದಳ- RJD ಸಂಸದ ಮನೋಜ್ ಝಾ, ಜಾಮೀನು ನಿರಾಕರಣೆ ಉಮರ್ ಖಾಲಿದ್ ಮತ್ತು ಶಾರ್ಜಿಲ್ ಅವರಿಗೆ ತೊಂದರೆಯುಂಟುಮಾಡುವ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದಿದ್ದಾರೆ.
Advertisement