

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR)ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ SIRಗೆ ಚುನಾವಣಾ ಆಯೋಗ, BJPಯ IT ಸೆಲ್ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಆರೋಪಿಸಿದ್ದಾರೆ.
ಎಸ್ಐಆರ್ ಪ್ರಶ್ನಿಸಿ ಟಿಎಂಸಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಸಿಎಂ ಹೊಸ ಆರೋಪಗಳನ್ನು ಮಾಡಿದ್ದಾರೆ.
ಮುಂಬರುವ ಗಂಗಾಸಾಗರ್ ಮೇಳದ ಸಿದ್ಧತೆಗಳ ಮೇಲ್ವಿಚಾರಣೆ ಮಾಡಲು ದಕ್ಷಿಣ 24 ಪರಗಣ ಜಿಲ್ಲೆಯ ಸಾಗರ್ ದ್ವೀಪಕ್ಕೆ ತಮ್ಮ ಎರಡು ದಿನಗಳ ಭೇಟಿಯನ್ನು ಮುಕ್ತಾಯಗೊಳಿಸುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾನರ್ಜಿ, ಮತದಾರರ ಪಟ್ಟಿ ಪರಿಷ್ಕರಣೆಯನ್ನು ನಡೆಸುವಾಗ EC "ಎಲ್ಲಾ ರೀತಿಯ ತಪ್ಪು ಕ್ರಮಗಳನ್ನು ಆಶ್ರಯಿಸುತ್ತಿದೆ" ಎಂದು ಟೀಕಿಸಿದರು.
"SIR ಅನ್ನು ನಡೆಸಲು EC ಎಲ್ಲಾ ರೀತಿಯ ತಪ್ಪು ಕ್ರಮಗಳಿಗೆ ಆಶ್ರಯಿಸುತ್ತಿದೆ. ಇದು ಅರ್ಹ ಮತದಾರರನ್ನು 'ಸತ್ತವರು' ಎಂದು ಗುರುತಿಸುತ್ತಿದೆ ಮತ್ತು ವೃದ್ಧರು, ಅನಾರೋಗ್ಯ ಪೀಡಿತರು ಹಾಗೂ ಅಸ್ವಸ್ಥರಿಗೆ ವಿಚಾರಣೆಗೆ ಹಾಜರಾಗುವಂತೆ ಒತ್ತಾಯಿಸುತ್ತಿದೆ. ಇದು BJP ಯ IT ಸೆಲ್ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್‌ಗಳನ್ನು ಈ ಪ್ರಕ್ರಿಯೆಗೆ ಬಳಸುತ್ತಿದೆ. ಇದು ಕಾನೂನುಬಾಹಿರ, ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ. ಇದು ಮುಂದುವರಿಯಬಾರದು" ಎಂದರು.
"SIR ನಲ್ಲಿ ಭಾಗವಹಿಸುವಾಗ ಜನರು ಜಾಗರೂಕರಾಗಿರಬೇಕೆಂದು ನಾನು ಒತ್ತಾಯಿಸುತ್ತೇನೆ. ಸಹಾಯದ ಅಗತ್ಯವಿರುವವರ ಪಕ್ಕದಲ್ಲಿ ಅವರು ನಿಲ್ಲಬೇಕು. ಅವರು ನನ್ನನ್ನು ಬೆಂಬಲಿಸುವ ಅಗತ್ಯವಿಲ್ಲ; ಈ ಪ್ರಕ್ರಿಯೆಯಿಂದ ತೊಂದರೆಯಲ್ಲಿರುವವರನ್ನು ಮಾತ್ರ ಬೆಂಬಲಿಸಿ" ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್ ಮೊರೆ ಹೋಗುವ ತಮ್ಮ ಪಕ್ಷದ ನಿರ್ಧಾರವನ್ನು ಪ್ರಕಟಿಸಿದ ಮಮತಾ, "ಇದು ಅಸ್ತಿತ್ವಕ್ಕಾಗಿ ಹೋರಾಟ. ನಾವು ಕಾನೂನು ಸಹಾಯವನ್ನು ಬಯಸುತ್ತಿದ್ದೇವೆ. ಎಸ್‌ಐಆರ್‌ನಿಂದಾಗಿ ಹಲವು ಜನ ಸಾವನ್ನಪ್ಪಿದ್ದಾರೆ. ನಾವು ನಾಳೆ ನ್ಯಾಯಾಲಯದ ಮೊರೆ ಹೋಗುತ್ತಿದ್ದೇವೆ" ಎಂದು ಹೇಳಿದರು.
"ಕೃತಕ ಬುದ್ಧಿಮತ್ತೆ ಈಗ ಹೊರಹೊಮ್ಮಿದೆ. ಚಿತ್ರಗಳು ಮತ್ತು ಧ್ವನಿಗಳನ್ನು ಬಳಸಿ, ಸುಳ್ಳುಗಳನ್ನು ಹರಡಬಹುದು. ಎಐ ಬಳಸಿ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ. ಮತದಾರರಿಗೆ ಶಾಸನಬದ್ಧವಾಗಿ ಪ್ರತಿಕ್ರಿಯಿಸಲು ಸಾಕಷ್ಟು ಅವಕಾಶವನ್ನು ನೀಡದೆ ಲಕ್ಷಾಂತರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ" ಎಂದು ಆರೋಪಿಸಿದರು.
Advertisement