

ಛತ್ರಪತಿ ಸಂಭಾಜಿನಗರ: ಮಾಜಿ ಸಿಎಂ ವಿಲಾಸ್‌ರಾವ್ ದೇಶ್‌ಮುಖ್ ಅವರ ಸ್ಮಾರಕ ನಾಶದ ಕುರಿತು ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತವಲ್ಲ. ಇದರಿಂದ ಯಾವುದೇ ನೋವಾಗಿದ್ದರೆ ದೇಶ್ ಮುಖ್ ಮಗನ ಬಳಿ ಕ್ಷಮೆಯಾಚಿಸುವುದಾಗಿ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್ ಅವರು ಮಂಗಳವಾರ ಹೇಳಿದ್ದಾರೆ.
ಜನವರಿ 15 ರಂದು ಲಾತೂರ್ ಮಹಾನಗರ ಪಾಲಿಕೆಗೆ ಚುನಾವಣೆ ನಿಗದಿಯಾಗಿದೆ. ಲಾತೂರ್ ನಿಂದ ವಿಲಾಸ್ ರಾವ್ ದೇಶ್ ಮುಖ್ ಅವರ ಸ್ಮಾರಕವನ್ನು ನಾಶಪಡಿಸಲಾಗುವುದು ಎಂದು ಸೋಮವಾರ ರವೀಂದ್ರ ಚವ್ಹಾಣ್ ಹೇಳಿದ್ದರು.
ಈ ಹೇಳಿಕೆಯು ಕಾಂಗ್ರೆಸ್‌ನಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ರಾಜ್ಯದ ಅಭಿವೃದ್ಧಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟ ನಾಯಕನ ಕೊಡುಗೆಯನ್ನು ಕುಂದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.
ವಿಲಾಸರಾವ್ ದೇಶಮುಖ್ ಅವರ ಪುತ್ರ ಮತ್ತು ಕಾಂಗ್ರೆಸ್ ನಾಯಕ ಅಮಿತ್ ದೇಶಮುಖ್ ಅವರು ಚವಾಣ್ ಅವರ ಹೇಳಿಕೆಯನ್ನು ಖಂಡಿಸಿದ್ದರು. ಹೊರಗಿನವರು ಬಂದು ಟೀಕೆ ಮಾಡ್ತಾರೆ ಎಂಬ ಕಾರಣಕ್ಕೆ ನಮ್ಮ ತಂದೆಯ ಸ್ಮಾರಕ ನಾಶಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬಾಲಿವುಡ್ ನಟ ರಿತೇಶ್ ದೇಶಮುಖ್ ಕೂಡ ತನ್ನ ತಂದೆಯ ಹೆಸರನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಂಗಳವಾರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸದ ಚವಾಣ್, ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಚಾರಗಳು ನಾಗರಿಕರ ಸೌಲಭ್ಯಗಳ ಇರಬೇಕು. ಈ ಸಮಸ್ಯೆಗಳನ್ನು ಯಾರು ತ್ವರಿತವಾಗಿ ಪರಿಹರಿಸುತ್ತಾರೆ ಎಂಬುದು ಮುಖ್ಯವಾಗಿರುತ್ತದೆ ಎಂದರು.
ವಿಲಾಸ್‌ರಾವ್ ದೇಶಮುಖ್ ಅವರನ್ನು ಟೀಕಿಸಿಲ್ಲ. ಆದರೆ ಕಾಂಗ್ರೆಸ್ ವಿಲಾಸ್‌ರಾವ್ ದೇಶಮುಖ್ ಹೆಸರಿನಲ್ಲಿ ಮತ ಕೇಳುತ್ತಿದೆ. ಅವರು ದೊಡ್ಡ ನಾಯಕರಾಗಿದ್ದರು ಮತ್ತು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ನನ್ನ ಉತ್ತಮ ಸ್ನೇಹಿತನಾಗಿರುವ ಅವರ ಮಗನ ಭಾವನೆಗಳಿಗೆ ನೋವುಂಟಾಗಿದ್ದರೆ, ನಾನು ಅವರಲ್ಲಿ ಕ್ಷಮೆಯಾಚಿಸುತ್ತೇನೆ. ಹೇಳಿಕೆಯನ್ನು ರಾಜಕೀಯವಾಗಿ ನೋಡಬಾರದು ಎಂದರು.
Advertisement