

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ 17 ವರ್ಷದ ಬಾಲಕಿ, ತನಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಭೇಟಿ ಮಾಡಿದ್ದು, ಈ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿ, ಬ್ಲ್ಯಾಕ್‌ಮೇಲ್ ಮಾಡಿದ ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಪಾಲ್ಘರ್‌ನ ವಾಲಿವ್ ನಿವಾಸಿಯಾಗಿರುವ ಸಂತ್ರಸ್ತ ಬಾಲಕಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್ ಮೂಲಕ ಆರೋಪಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಳು. ಅವರ ಸ್ನೇಹ ಪ್ರೇಮ ಸಂಬಂಧವಾಗಿ ಬದಲಾಗಿದ್ದು, ನಂತರ ಆರೋಪಿಯೊಂದಿಗೆ ಮಧ್ಯಪ್ರದೇಶಕ್ಕೆ ಓಡಿಹೋಗಿದ್ದಳು.
ಕಳೆದ ವರ್ಷ ಫೆಬ್ರವರಿ ಮತ್ತು ಸೆಪ್ಟೆಂಬರ್ ರ ನಡುವೆ ಆರೋಪಿಯೊಂದಿಗೆ ಬಾಲಕಿ ವಾಸಿಸುತ್ತಿದ್ದಳು. ಆ ಸಮಯದಲ್ಲಿ ಬಾಲಕಿ ಚಿತ್ರಹಿಂಸೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ ಸಂತ್ರಸ್ತೆ, ಆರೋಪಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಸೆಪ್ಟೆಂಬರ್‌ನಲ್ಲಿ ತನ್ನ ಹೆತ್ತವರ ಮನೆಗೆ ಮರಳಿದ್ದಳು.
ಆರೋಪಿಯು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂತ್ರಸ್ತೆಯ ಆಕ್ಷೇಪಾರ್ಹ ಫೋಟೋಗಳನ್ನು ಪೋಸ್ಟ್ ಮಾಡಲು ಪ್ರಾರಂಭಿಸಿದನು. ಬಾಲಕಿಗೆ ತನ್ನ ಬಳಿಗೆ ವಾಪಸ್ ಬರುವಂತೆ ಒತ್ತಾಯಿಸಿ, ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು, ಕಳೆದ ವರ್ಷದ ಫೆಬ್ರವರಿಯಲ್ಲಿ, ಆಕೆಯ ಕಣ್ಮರೆಯಾದ ನಂತರ, ಆಕೆಯ ಕುಟುಂಬವು ಆರೋಪಿಯ ವಿರುದ್ಧ ಅಪಹರಣ ಪ್ರಕರಣವನ್ನು ದಾಖಲಿಸಿತ್ತು.
ಸಂತ್ರಸ್ತೆಯ ಸಹೋದರಿ ನೀಡಿದ ಹೊಸ ದೂರಿನ ಆಧಾರದ ಮೇಲೆ, ಪೊಲೀಸರು ಡಿಸೆಂಬರ್ 28, 2025 ರಂದು ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳಾದ 64 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Advertisement