

ನವದೆಹಲಿ: ಪೂರ್ವ ದೆಹಲಿಯ ತ್ರಿಲೋಕಪುರಿ ಪ್ರದೇಶದಲ್ಲಿ ಅಪ್ರಾಪ್ತ ಬಾಲಕರ ಗುಂಪೊಂದು 17 ವರ್ಷದ ಯುವಕನಿಗೆ ಒದ್ದು, ಹೊಡೆದು ಹತ್ಯೆ ಮಾಡಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಈ ಘಟನೆ ಸೋಮವಾರ ಸಂಜೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಬಾಲಕರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
11ನೇ ತರಗತಿಯ ವಿದ್ಯಾರ್ಥಿ ಮೋಹಿತ್ ಅವರನ್ನು ಸುತ್ತುವರೆದಿದ ಬಾಲಕರು, ನೆಲಕ್ಕೆ ಬಿದ್ದು ಪ್ರಜ್ಞೆ ಕಳೆದುಕೊಳ್ಳುವವರೆಗೂ ಪದೇ ಪದೇ ಗುದ್ದಿ, ಒದ್ದಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಅವರ ಮೇಲೂ ಬಾಲಕರ ಗುಂಪು ಹಲ್ಲೆ ನಡೆಸಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(ಪೂರ್ವ) ಅಭಿಷೇಕ್ ಧನಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಮವಾರ ಸಂಜೆ 7.25 ಕ್ಕೆ, ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯು ದೈಹಿಕ ಹಲ್ಲೆಯ ಇತಿಹಾಸ ಹೊಂದಿರುವ ಪ್ರಜ್ಞಾಹೀನ ರೋಗಿಯನ್ನು ದಾಖಲಿಸಿದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತ್ತು ಎಂದು ಅಧಿಕಾರಿ ಹೇಳಿದ್ದಾರೆ.
"ಮೋಹಿತ್ ಅವರನ್ನು ಆರಂಭದಲ್ಲಿ ಶಾಸ್ತ್ರಿ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಯಿತು ಮತ್ತು ನಂತರ ಗಾಯಗಳ ಗಂಭೀರತೆಯಿಂದಾಗಿ ಹೆಚ್ಚಿನ ಚಿಕಿತ್ಸೆಗಾಗಿ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ.
ಮೃತ ವಿದ್ಯಾರ್ಥಿ ಸ್ಥಳೀಯ ಬಾಲಾಪರಾಧಿಗಳಲ್ಲಿ ಒಬ್ಬರೊಂದಿಗೆ ಮೊದಲಿನಿಂದಲೂ ಜಗಳ ಇತ್ತು. ಸೋಮವಾರ ಸಂಜೆ, ವಿದ್ಯಾರ್ಥಿ ಮತ್ತು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು, ಅದು ಯುವಕನ ಸಾವಿನಲ್ಲಿ ಅಂತ್ಯವಾಗಿದೆ" ಎಂದು ಹೆಚ್ಚುವರಿ ಕಮಿಷನರ್ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು ತನಿಖೆಯ ಆಧಾರದ ಮೇಲೆ, ಘಟನೆಯಲ್ಲಿ ಭಾಗಿಯಾಗಿರುವ ಆರು ಬಾಲಕನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
Advertisement