

ಜೈಪುರ: ಕಳ್ಳತನ ಮಾಡಲು ಮನೆಯೊಳಗೆ ನುಗ್ಗಿದ್ದ ಕಳ್ಳನೋರ್ವ ತಪ್ಪಿಸಿಕೊಳ್ಳುವ ಭರದಲ್ಲಿ ಮನೆಯ ಫ್ಯಾನ್ ಹೋಲ್ ಗೆ ಸಿಲುಕಿ ಒದ್ದಾಡಿದ ಘಟನೆ ರಾಜಸ್ತಾನದಲ್ಲಿ ನಡೆದಿದೆ.
ಹೌದು.. ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಕಳ್ಳತನಕ್ಕೆ ಯತ್ನಿಸಿದ ಕಳ್ಳನೋರ್ವ ಮನೆಯ ಅಡುಗೆಕೋಣೆಯ ಎಕ್ಸಾಸ್ಟ್ ಫ್ಯಾನ್ ಕಿಂಡಿಯಲ್ಲಿ ಸಿಲುಕಿಕೊಂಡಿರುವ ವಿಚಿತ್ರ ಘಟನೆಯೊಂದು ರಾಜಸ್ಥಾನ ಕೋಟಾದಲ್ಲಿ ನಡೆದಿದೆ.
ಕೋಟಾದ ನಿವಾಸಿ ಸುಭಾಷ್ ಕುಮಾರ್ ರಾವತ್ ಅವರ ಮನೆಯಲ್ಲೇ ಕಳ್ಳತನ ಯತ್ನ ನಡೆದಿದ್ದು ಸುಭಾಷ್ ಕುಮಾರ್ ಕುಟುಂಬಸ್ಥರು ಜನವರಿ 3 ರಂದು ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು.
ಈ ವೇಳೆ ಮನೆಗೆ ಇಬ್ಬರು ಕಳ್ಳರು ನುಗ್ಗಿದ್ದು ಈ ವೇಳೆ ಓರ್ವ ಕಳ್ಳ ಮನೆಯಲ್ಲಿನ ಅಡುಗೆ ಮನೆಯ ಎಕ್ಸಾಸ್ಟ್ ಫ್ಯಾನ್ ನಿಂದ ಒಳಗೆ ನುಗ್ಗಲು ಯತ್ನಿಸಿದ್ದಾನೆ. ದುರಾದೃಷ್ಟ ಎಂದರೆ ಆತ ಅಲ್ಲಿಯೇ ಸಿಲುಕಿ ಒದ್ದಾಡಿದ್ದಾನೆ.
ಮನೆಗೆ ಬಂದ ಮಾಲೀಕರಿಗೆ ಆಘಾತ
ಇತ್ತ ಭಾನುವಾರ (ಡಿ.4) ರಂದು ರಾತ್ರಿ ಮನೆಮಂದಿ ಮನೆಗೆ ಬಂದಿದ್ದಾರೆ. ಈ ವೇಳೆ ಅವರು ಬಂದ ದ್ವಿಚಕ್ರ ವಾಹನದ ಬೆಳಕು ನೇರವಾಗಿ ಅಡುಗೆ ಕೊನೆಯ ಕಿಟಕಿಗೆ ಬಿದ್ದಿದೆ. ಈ ವೇಳೆ ಕಿಟಕಿಯಲ್ಲಿ ವ್ಯಕ್ತಿಯೊಬ್ಬನ ಕಾಲುಗಳು ನೇತಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಬಳಿಕ ಬಂದ ಪೊಲೀಸರು ಸ್ಥಳೀಯರ ಜೊತೆ ಸೇರಿ ಕೆಲ ಗಂಟೆಗಳ ಕಾಲ ಹರಸಾಹಸ ಪಟ್ಟು ಕಳ್ಳನನ್ನು ಹೊರತೆಗೆದಿದ್ದಾರೆ.
ಬಳಿಕ ಪೊಲೀಸರು ಯುವಕನನ್ನು ವಿಚಾರಣೆ ನಡೆಸಿದ ವೇಳೆ ತಾವು ಕಳ್ಳತನಕ್ಕೆ ಬಂದಿದ್ದು ತನ್ನ ಜೊತೆ ಇನ್ನೋರ್ವ ಬಂದಿದ್ದು ಮನೆಯವರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಅಲ್ಲದೆ ಯಾರಿಗೂ ಅನುಮಾನ ಬರಬಾರದೆಂದು ಯುವಕರು ತಾವು ಬಂದ ವಾಹನಕ್ಕೆ ಪೊಲೀಸ್ ಸ್ಟಿಕರ್ ಅಂಟಿಸಿದ್ದರು ಎಂದು ಹೇಳಿಕೊಂಡಿದ್ದಾನೆ. ಬಳಿಕ ಪೊಲೀಸರು ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
Advertisement