

ಮುಂಬೈ: ವೆನಿಜುವೆಲಾ ಅಧ್ಯಕ್ಷರಂತೆ ಟ್ರಂಪ್ ನಮ್ಮ ಭಾರತದ ಪ್ರಧಾನಿಯನ್ನು ಅಪಹರಿಸುತ್ತಾರಾ? ಎಂದು ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ನೀಡಿರುವ ವಿಚಿತ್ರ, ವಿಲಕ್ಷಣ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯಕ್ಕೆ ಗುರಿಯಾಗಿದೆ.
ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಸೆರೆಗೆ ಯುಎಸ್ ಮಿಲಿಟರಿ ಕಾರ್ಯಾಚರಣೆಯನ್ನು ಉಲ್ಲೇಖಿಸಿ ಮಾತನಾಡಿದ ಚವಾಣ್, ಒಂದು ಪ್ರಶ್ನೆ ಕೇಳಿದಿದ್ದಾರೆ. ಅಸಂಬದ್ಧ ಪ್ರಶ್ನೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಅಪಹಾಸ್ಯ ಮಾಡುತ್ತಿದ್ದಾರೆ.
ವೆನೆಜುವೆಲಾದಲ್ಲಿ ನಡೆದಂತಹ ಘಟನೆ ಏನಾದರೂ ಭಾರತದಲ್ಲಿ ನಡೆಯುತ್ತದೆಯೇ? ಟ್ರಂಪ್ ನಮ್ಮ ಪ್ರಧಾನಿಯನ್ನು ಅಪಹರಿಸುತ್ತಾರಾ? ಎಂದು ಕೇಳಿದ್ದಾರೆ. ಇದು ಇಡೀ ದೇಶಕ್ಕೆ ಮಾಡಿದ ಅಪಮಾನ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಎಸ್‌ಪಿ ವೈದ್ ಅವರು ಕಟುವಾಗಿ ಟೀಕಿಸಿದ್ದಾರೆ. ಕೆಲವರು ಮೂರ್ಖ, ಅನಕ್ಷರಸ್ಥ ಮತ್ತಿತರ ಪದಗಳಿಂದ ಕಿಡಿಕಾರಿದ್ದಾರೆ.
ಚವಾಣ್ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಭಾರತದ ಮೇಲೆ ಅಮೆರಿಕದ ಹೆಚ್ಚಿನ ಸುಂಕ ಕುರಿತು ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದ ನಂತರ ಮಾತನಾಡಿದ ಚವಾಣ್, ಶೇ.50ರಷ್ಟು ಸುಂಕ ವಿಧಿಸುವುದರಿಂದ ವ್ಯಾಪಾರ ವಹಿವಾಟು ಸಾಧ್ಯವಿಲ್ಲ."ನಮ್ಮ ಜನರು ಈ ಹಿಂದೆ ಯುಎಸ್‌ಗೆ ರಫ್ತು ಮಾಡುವ ಮೂಲಕ ಗಳಿಸುತ್ತಿದ್ದಂತೆ ಇನ್ನೂ ಮುಂದೆ ಲಾಭ ಗಳಿಸಲು ಸಾಧ್ಯವಾಗುವುದಿಲ್ಲ. ಪರ್ಯಾಯ ಮಾರುಕಟ್ಟೆಗಳನ್ನು ಹುಡುಕಬೇಕಾಗಿದೆ ಮತ್ತು ಆ ದಿಕ್ಕಿನಲ್ಲಿ ಈಗಾಗಲೇ ಪ್ರಯತ್ನಗಳು ನಡೆಯುತ್ತಿವೆ" ಎಂದು ಅವರು ಹೇಳಿದರು.
ಬಳಿಕ ಟ್ರಂಪ್ ವೆನೆಜುವೆಲಾದೊಂದಿಗೆ ಮಾಡಿದಂತೆಯೇ ಭಾರತದೊಂದಿಗೆ ಮಾಡಿದರೆ ಏನು? ಎಂದು ಪ್ರಶ್ನೆ ಕೇಳಿದರು. ಇದು ನೆಟ್ಟಿಗರ ಟೀಕೆಗಳಿಗೆ ಗುರಿಯಾಗಿದೆ.
Advertisement