

ಹೈದರಾಬಾದ್: ಅಮೆರಿಕದಲ್ಲಿ ಹತ್ಯೆಗೀಡಾಗಿದ್ದಾರೆ ಎನ್ನಲಾದ ನಿಖಿತಾ ಗೋಡಿಶಾಲಾ ಅವರ ಮೃತದೇಹವನ್ನು ಜನವರಿ 7 ಅಥವಾ 8 ರಂದು ದೇಶಕ್ಕೆ ತರಲಾಗುವುದು ಎಂದು ಕೇಂದ್ರ ಕಲ್ಲಿದ್ದಲು ಸಚಿವ ಜಿ ಕಿಶನ್ ರೆಡ್ಡಿ ಅವರು ಬುಧವಾರ ತಿಳಿಸಿದ್ದಾರೆ.
ನಿಖಿತಾ ಮೃತದೇಹ ಭಾರತಕ್ಕೆ ತರುವುದಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಮತ್ತು ಆಡಳಿತಾತ್ಮಕ ಕಾರ್ಯವಿಧಾನಗಳು ಪೂರ್ಣಗೊಂಡಿವೆ ಎಂದು ಅವರು ಹೇಳಿದ್ದಾರೆ.
"ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ನಿಖಿತಾ ಗೋಡಿಶಾಲಾ ಅವರ ದುರದೃಷ್ಟಕರ ನಿಧನದ ಕುರಿತು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಿಶನ್ ರೆಡ್ಡಿ ಅವರು, ಮೃತದೇಹ ವಾಪಸ್ ತರಲು ಅಗತ್ಯವಿರುವ ಎಲ್ಲಾ ಕಾರ್ಯವಿಧಾನಗಳು ಈಗ ಪೂರ್ಣಗೊಂಡಿವೆ ಮತ್ತು ಮೃತದೇಹ ಇಂದು ಅಥವಾ ನಾಳೆ ಭಾರತಕ್ಕೆ ಬರುವ ನಿರೀಕ್ಷೆಯಿದೆ" ಎಂದು ಅವರು ತಿಳಿಸಿದ್ದಾರೆ.
ನಿಖಿತಾ ಅವರ ಮೃತದೇಹವನ್ನು ಭಾರತಕ್ಕೆ ಕೊಂಡೊಯ್ಯಲು ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸುವ ಪತ್ರವನ್ನು ಅವರು ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಿಂದ ಪೋಸ್ಟ್ ಮಾಡಿದ್ದಾರೆ.
ನಿಖಿತಾ ಗೋಡಿಶಾಲಾ ಅವರ ಕುಟುಂಬದ ವಿನಂತಿಯ ಮೇರೆಗೆ, ಕಿಶನ್ ರೆಡ್ಡಿ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರನ್ನು ಸಂಪರ್ಕಿಸಿ ಅವರ ಮೃತದೇಹವನ್ನು ಭಾರತಕ್ಕೆ ವಾಪಸ್ ಕಳುಹಿಸಲು ಸಹಕರಿಸುವಂತೆ ಕೋರಿದ್ದರು.
ಜನವರಿ 2ರಂದು ನಾಪತ್ತೆಯಾಗಿದ್ದ ನಿಖಿತಾಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ಆಕೆಯ ಮೃತದೇಹ ಕೊಲಂಬಿಯಾದ ಟ್ವಿನ್ ರಿವರ್ಸ್ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಆಕೆಯ ಮಾಜಿ ಗೆಳೆಯ 26 ವರ್ಷದ ಅರ್ಜುನ್ ಶರ್ಮಾನನ್ನು ಆರೋಪಿ ಎಂದು ಶಂಕಿಸಲಾಗಿದೆ.
ನಿಖಿತಾ ಮಾಜಿ ಗೆಳೆಯ ಅರ್ಜುನ್ ವಿರುದ್ಧ ಕೊಲೆ ಆರೋಪ ಹೊರಿಸಿ ಬಂಧನ ವಾರಂಟ್ ಜಾರಿಗೊಳಿಸಲಾಗಿದೆ. ಅರ್ಜುನ್ ಶರ್ಮಾ ಘಟನೆಯ ದಿನವೇ ಅಮೆರಿಕದಿಂದ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement