

ವಾಷಿಂಗ್ಟನ್: ಅಮೆರಿಕದ ಮೇರಿಲ್ಯಾಂಡ್ ನಲ್ಲಿ ಭಾರತೀಯ ಮೂಲದ 27 ವರ್ಷದ ಯುವತಿ ನಿಕಿತಾ ಗೋಡಿಶಾಲಾ ಅವರ ಶವ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ.
ಜನವರಿ 2ರಂದು ನಾಪತ್ತೆಯಾಗಿದ್ದ ನಿಕಿತಾರನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಇದೀಗ ಆಕೆಯ ಮೃತದೇಹ ಕೊಲಂಬಿಯಾದ ಟ್ವಿನ್ ರಿವರ್ಸ್ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಆಕೆಯ ಮಾಜಿ ಗೆಳೆಯ 26 ವರ್ಷದ ಅರ್ಜುನ್ ಶರ್ಮಾನನ್ನು ಆರೋಪಿ ಎಂದು ಶಂಕಿಸಲಾಗಿದೆ.
ನಿಕಿತಾ ಮಾಜಿ ಗೆಳೆಯ ಅರ್ಜುನ್ ವಿರುದ್ಧ ಕೊಲೆ ಆರೋಪ ಹೊರಿಸಿ ಬಂಧನ ವಾರಂಟ್ ಜಾರಿಗೊಳಿಸಲಾಗಿದೆ. ಅರ್ಜುನ್ ಶರ್ಮಾ ಘಟನೆಯ ದಿನವೇ ಅಮೆರಿಕದಿಂದ ಭಾರತಕ್ಕೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಿಕಾಟ್ ನಗರದ ನಿವಾಸಿಯಾಗಿದ್ದ ನಿಕಿತಾ ಗೋಡಿಶಾಲಾ ಜನವರಿ 2ರಂದು ನಾಪತ್ತೆಯಾಗಿದ್ದರು. ಆಕೆಯ ಮಾಜಿ ಗೆಳೆಯ ಅರ್ಜುನ್ ಶರ್ಮಾ ಅವರೇ ನಾಪತ್ತೆ ದೂರು ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದ್ದರು.
ಡಿಸೆಂಬರ್ 31ರಂದು ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನಿಕಿತಾ ಅವರನ್ನು ಕೊನೆಯ ಬಾರಿಗೆ ನೋಡಿದ್ದಾಗಿ ಶರ್ಮಾ ಪೊಲೀಸರಿಗೆ ತಿಳಿಸಿದ್ದರು. ಆದರೆ ತನಿಖೆಯಲ್ಲಿ ಶರ್ಮಾ ಅವರೇ ಆರೋಪಿಯಾಗಿ ಪತ್ತೆಯಾಗಿದ್ದಾರೆ. ಘಟನೆಯ ದಿನವೇ ಶರ್ಮಾ ಭಾರತಕ್ಕೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಅರ್ಜುನ್ ಶರ್ಮಾ ವಿರುದ್ಧ ಕೊಲೆ ಆರೋಪ ಹೊರಿಸಿದ್ದಾರೆ. ಬಂಧನ ವಾರಂಟ್ ಜಾರಿಗೊಳಿಸಲಾಗಿದೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತನಿಖೆ ಮುಂದುವರಿದಿದ್ದು, ಶರ್ಮಾ ಅವರನ್ನು ಭಾರತದಿಂದ ವಾಪಸ್ ಕರೆತರಲು ಪ್ರಯತ್ನ ನಡೆಯುತ್ತಿದೆ.
ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನಿಕಿತಾ ಗೋಡಿಶಾಲಾ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಸಾಧ್ಯವಿರುವ ಎಲ್ಲ ಕಾನ್ಸುಲರ್ ಸಹಾಯ ನೀಡುತ್ತಿದೆ ಎಂದು ತಿಳಿಸಿದೆ. ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ತನಿಖೆಯಲ್ಲಿ ಸಹಕಾರ ನೀಡುತ್ತಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ನಿಕಿತಾ ಗೋಡಿಶಾಲಾ ಅವರು ಭಾರತೀಯ ಮೂಲದವರಾಗಿದ್ದು, ಅಮೆರಿಕದಲ್ಲಿ ವಾಸಿಸುತ್ತಿದ್ದರು.
Advertisement