

ಒಟ್ಟಾವಾ: ಕೆನಡಾದ ಆಸ್ಪತ್ರೆಯೊಂದರ ತುರ್ತು ಚಿಕಿತ್ಸಾ ವಿಭಾಗದಲ್ಲಿ 8 ಗಂಟೆಗಳ ಕಾಲ ಕಾದರೂ ಸೂಕ್ತ ಚಿಕಿತ್ಸೆ ಸಿಗದೆ ಭಾರತ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಭೀಕರ ಘಟನೆ ಗುರುವಾರ ವರದಿಯಾಗಿದೆ.
ಡಿ.22ರಂದು ಎದೆ ನೋವಿನಿಂದ ಬಳಲುತ್ತಿದ್ದ 44 ವರ್ಷದ ಪ್ರಶಾಂತ್ ಶ್ರೀಕುಮಾರ್ ಎನ್ನುವವರನ್ನು ಕೆನಡಾದ ಎಡ್ಮಂಟನ್‌ನ ಗ್ರೇ ನನ್ಸ್ ಕಮ್ಯುನಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆದರೆ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಬಳಿಯೇ ಅವರು ಎಂಟು ಗಂಟೆಗಳ ಕಾಲ ಚಿಕಿತ್ಸೆಗಾಗಿ ಕಾದಿದ್ದಾರೆ. ಕೊನೆಯಲ್ಲಿ ಶ್ರೀಕುಮಾರ್ ಅವರು ‘ಅಪ್ಪಾ, ನನ್ನಿಂದ ನೋವು ತಡೆಯಲು ಆಗುತ್ತಿಲ್ಲ’ ಎನ್ನುತ್ತಲೇ ಪ್ರಾಣಬಿಟ್ಟಿದ್ದಾರೆ ಎಂದು ಹೇಳಲಾಗಿದೆ.
44 ವರ್ಷದ ಭಾರತೀಯ ಮೂಲದ ವ್ಯಕ್ತಿ ಶ್ರೀಕುಮಾರ್ ಶಂಕಿತ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಕೆನಡಾ ದೇಶದಲ್ಲಿ ತುರ್ತು ಆರೋಗ್ಯ ಸೇವೆಗೆ ಸ್ಪಂದಿಸುವ ಸಮಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೂರು ಮಕ್ಕಳ ತಂದೆಯಾದ ಪ್ರಶಾಂತ್ ಶ್ರೀಕುಮಾರ್ ಡಿಸೆಂಬರ್ 22 ರಂದು ಕೆಲಸದಲ್ಲಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಅವರನ್ನು ಕೆನೆಡಾದ ಆಗ್ನೇಯ ಎಡ್ಮಂಟನ್‌ನಲ್ಲಿರುವ ಗ್ರೇ ನನ್ಸ್ ಕಮ್ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಬರುತ್ತಲೇ ಶ್ರೀಕುಮಾರ್ ಅವರನ್ನು ಟ್ರಯೇಜ್‌ನಲ್ಲಿ ತಪಾಸಣೆಗೆ ಒಳಪಡಿಸಲಾಯಿತು ಮತ್ತು ನಂತರ ತುರ್ತು ಚಿಕಿತ್ಸಾ ಕೋಣೆಯ ಕಾಯುವ ಪ್ರದೇಶದಲ್ಲಿ ಕುಳಿತುಕೊಳ್ಳಲು ಕೇಳಲಾಯಿತು.
ಈ ವೇಳೆಗಾಗಲೇ ಶ್ರೀಕುಮಾರ್ ಅವರ ತಂದೆ ಕುಮಾರ್ ಶ್ರೀಕುಮಾರ್ ಕೂಡ ಆಸ್ಪತ್ರೆಗೆ ತಲುಪಿದ್ದರು. ತಂದೆಯನ್ನು ನೋಡುತ್ತಲೇ ಶ್ರೀಕುಮಾರ್ "ಅಪ್ಪಾ, ನನಗೆ ನೋವು ಸಹಿಸಲಾಗುತ್ತಿಲ್ಲ" ಎಂದು ಹೇಳಿದರು. ತಂದೆ ಕೂಡ ವೈದ್ಯರಿಗೆ ಚಿಕಿತ್ಸೆ ನೀಡುವಂತೆ ಕೇಳಿದ್ದಾರೆ. ಈ ವೇಳೆ ಶ್ರೀ ಕುಮಾರ್ ಅವರನ್ನು ಆಸ್ಪತ್ರೆ ಸಿಬ್ಬಂದಿ ಪರೀಕ್ಷಿಸಿದ್ದಾರೆ. ಈ ವೇಳೆ ಶ್ರೀಕುಮಾರ್ ತಮಗೆ "10 ರಲ್ಲಿ 15ರಷ್ಟು" ತೀವ್ರ ನೋವು ಇದೆ ಎಂದು ಆಸ್ಪತ್ರೆ ಸಿಬ್ಬಂದಿಗೆ ಪದೇ ಪದೇ ತಿಳಿಸಿದರು.
ಬಳಿಕ ಅವರಿಗೆ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ) ನಡೆಸಲಾಯಿತು, ಆದರೆ ಸಿಬ್ಬಂದಿ ಕುಟುಂಬಕ್ಕೆ ಯಾವುದೇ ಮಹತ್ವದ ಸಮಸ್ಯೆ ಇಲ್ಲ ಎಂದು ಹೇಳಿದರು. ನೋವಿಗೆ ಅವರಿಗೆ ಟೈಲೆನಾಲ್ ನೀಡಲಾಯಿತು. ಬಳಿಕ ವೈದ್ಯರು ಬರುವವರೆಗೂ ಕಾಯಿರಿ ಎಂದು ಹೇಳಿ ಹೋದರು ಎಂದು ತಂದೆ ಹೇಳಿದ್ದಾರೆ.
ಬಳಿಕ ದೀರ್ಘ ಕಾಯುವಿಕೆಯ ಸಮಯದಲ್ಲಿ, ನರ್ಸ್‌ಗಳು ನಿಯತಕಾಲಿಕವಾಗಿ ಅವರ ರಕ್ತದೊತ್ತಡವನ್ನು ಪರಿಶೀಲಿಸಿದರು. ಈ ವೇಳೆ ಶ್ರೀ ಕುಮಾರ್ ರಕ್ತದೊತ್ತಡ ಕೂಡ ಏರುಪೇರಾಗಿತ್ತು. ಪ್ರಶಾಂತ್ ಅವರ ಪತ್ನಿ ಅವರ ರಕ್ತದೊತ್ತಡ 210 ಕ್ಕೆ ಏರಿದೆ ಎಂದು ಹೇಳಿದರು. ಮತ್ತೆ ಅವರಿಗೆ ಟೈಲೆನಾಲ್ ಮಾತ್ರ ನೀಡಲಾಯಿತು. ಎಂಟು ಗಂಟೆಗಳಿಗೂ ಹೆಚ್ಚು ಕಾಲ ಕಾಯುತ್ತಿದ್ದ ನಂತರ, ಪ್ರಶಾಂತ್ ಅವರನ್ನು ಅಂತಿಮವಾಗಿ ತುರ್ತು ಚಿಕಿತ್ಸಾ ಪ್ರದೇಶಕ್ಕೆ ಕರೆಸಲಾಯಿತು. ಆದರೆ ಅಲ್ಲಿಯೇ ಶ್ರೀಕುಮಾರ್ ಸಾವನ್ನಪ್ಪಿದ್ದಾರೆ ಎಂದು ತಂದೆ ಹೇಳಿದ್ದಾರೆ.
ಮಗ ಪ್ರಜ್ಞಾಹೀನನಾದ ಕೂಡಲೇ ನರ್ಸ್ ಗಳು ಬಂದು ಅವರನ್ನು ಎಚ್ಚರಿಸುವ ಕೆಲಸ ಮಾಡಿದರು. ಆದರೆ ಅದು ತುಂಬಾ ತಡವಾಗಿತ್ತು. ಪ್ರಶಾಂತ್ ಶ್ರೀಕುಮಾರ್ ಸ್ಪಷ್ಟವಾಗಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸಿದ್ದರೆ ಆತ ಬದುಕಿರುತ್ತಿದ್ದ ಎಂದು ತಂದೆ ಆರೋಪಿಸಿದ್ದಾರೆ.
‘ನನ್ನ ಮಗನಿಗೆ ವಿಪರೀತ ಎದೆನೋವು ಇತ್ತು. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದಾಗ ಇಸಿಜಿ ಮಾಡಿದ್ದಾರೆ. ಈ ವೇಳೆ ಯಾವುದೇ ಅನಾರೋಗ್ಯದ ಲಕ್ಷಣಗಳು ಕಾಣಿಸಿಲ್ಲವೆಂದು ಕಾಯುವಂತೆ ಹೇಳಿದ್ದಾರೆ. ನಂತರ ಟೈಲೆನಾಲ್ ಮಾತ್ರೆಯನ್ನು ನೀಡಿದ್ದಾರೆ. ಆದರೆ ರಕ್ತದೊತ್ತಡ ಹೆಚ್ಚುತ್ತಲೇ ಇತ್ತು’ ಎಂದು ಶ್ರೀಕುಮಾರ್ ಅವರ ತಂದೆ ಹೇಳಿರುವುದಾಗಿ ಗ್ಲೋಬಲ್ ನ್ಯೂಸ್ ಏಜೆನ್ಸಿ ವರದಿ ತಿಳಿಸಿದೆ.
‘ಎಂಟು ಗಂಟೆ ಕಾದ ಬಳಿಕ ಚಿಕಿತ್ಸೆಗೆ ಕರೆದರು. ಅಷ್ಟರಲ್ಲಿ ರಕ್ತದೊತ್ತಡ ತೀವ್ರವಾಗಿ ಏರಿಕೆಯಾಗಿತ್ತು. 10 ಸೆಕೆಂಡ್‌ಗಳಲ್ಲಿ ನನ್ನನ್ನು ನೋಡಿ ಅಪ್ಪಾ ನೋವು ತಡೆಯಲಾಗುತ್ತಿಲ್ಲ ಎಂದು ಎದೆಯನ್ನು ಬಿಗಿಯಾಗಿ ಹಿಡಿದುಕೊಂಡು ಬಿದ್ದಿದ್ದಾರೆ, ಮತ್ತೆ ಏಳಲೇಇಲ್ಲ’ ಎಂದು ತಂದೆ ಕಣ್ಣೀರಾಗಿದ್ದಾರೆ.
ಶ್ರೀಕುಮಾರ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನೂ ಅಗಲಿದ್ದಾರೆ.
ಆಸ್ಪತ್ರೆ ಹೇಳಿದ್ದೇನು?
ಶ್ರೀಕುಮಾರ್ ತಂದೆಯ ಆರೋಪಕ್ಕೆ ಪ್ರತಿಕ್ರಿಯಿಸಲು ಆಸ್ಪತ್ರೆ ನಿರ್ವಹಿಸುವ ಸರ್ಕಾರಿ ಹೆಲ್ತ್‌ಕೇರ್ ನೆಟ್‌ವರ್ಕ್ ನಿರಾಕರಿಸಿದೆ. ಆದರೆ ಈ ಪ್ರಕರಣದ ಬಗ್ಗೆ ಮುಖ್ಯ ವೈದ್ಯಕೀಯ ಪರೀಕ್ಷಕ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆ ಆಡಳಿತ ಮಂಡಳಿ "ರೋಗಿಯ ಕುಟುಂಬ ಮತ್ತು ಸ್ನೇಹಿತರಿಗೆ ನಾವು ನಮ್ಮ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ. ನಮ್ಮ ರೋಗಿಗಳು ಮತ್ತು ಸಿಬ್ಬಂದಿಯ ಸುರಕ್ಷತೆ ಮತ್ತು ಆರೈಕೆಗಿಂತ ಮುಖ್ಯವಾದುದು ಯಾವುದೂ ಇಲ್ಲ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದು, ಈ ಪ್ರಕರಣವು ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿಯಿಂದ ಪರಿಶೀಲನೆಯಲ್ಲಿದೆ ಎಂದು ಹೇಳಿದೆ.
ಅಂತೆಯೇ ಗೌಪ್ಯತೆ ಕಾಳಜಿಯಿಂದಾಗಿ ರೋಗಿಗಳ ಆರೈಕೆಯ ನಿರ್ದಿಷ್ಟತೆಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಅಂದಹಾಗೆ ಈ ಗ್ರೇ ನನ್ಸ್ ಕಮ್ಯುನಿಟಿ ಆಸ್ಪತ್ರೆಯನ್ನು ಕವೆನಂಟ್ ಹೆಲ್ತ್ ಹೆಲ್ತ್‌ಕೇರ್ ನೆಟ್‌ವರ್ಕ್ ನಿರ್ವಹಿಸುತ್ತದೆ.
Advertisement