

ನವದೆಹಲಿ: ಸಂಘಟಿತ ಗ್ಯಾಂಗ್ ವೊಂದು ಸರ್ಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡುವ ಮೂಲಕ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾ ಜಾರಿ ನಿರ್ದೇಶನಾಲಯ (ED) ದೇಶಾದ್ಯಂತ ಶೋಧ ಕಾರ್ಯ ಕೈಗೊಂಡಿದೆ.
ಆರಂಭದಲ್ಲಿ ಭಾರತೀಯ ರೈಲ್ವೇ ಹೆಸರಿನಲ್ಲಿ ಹಗರಣ ಬೆಳಕಿಗೆ ಬಂದರೂ ಅರಣ್ಯ ಇಲಾಖೆ, ಭಾರತೀಯ ಅಂಚೆ, ಆದಾಯ ತೆರಿಗೆ ಇಲಾಖೆ, ಹೈಕೋರ್ಟ್, ಪಿಡಬ್ಲ್ಯೂಡಿ, ಬಿಹಾರ ಸರ್ಕಾರ, ಡಿಡಿಎ ಮತ್ತು ರಾಜಸ್ಥಾನ ಸಚಿವಾಲಯ ಸೇರಿದಂತೆ 40 ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳು ಮತ್ತು ಇಲಾಖೆಗಳಲ್ಲಿ ಈ ಗ್ಯಾಂಗ್ ಕಾರ್ಯ ನಿರ್ವಹಿಸುತ್ತಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಗ್ಯಾಂಗ್ ನಕಲಿ ನೇಮಕಾತಿ ಪತ್ರ ನೀಡಲು ಅಧಿಕೃತ ಸರ್ಕಾರಿ ಡೊಮೇನ್‌ಗಳನ್ನು ದುರ್ಬಳಕೆ ಮಾಡಿಕೊಂಡು ನಕಲಿ ಇಮೇಲ್ ಖಾತೆಗಳನ್ನು ಬಳಸಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತರ ನಂಬಿಕೆ ಗಳಿಸಲು ಕೆಲವರಿಗೆ ಎರಡರಿಂದ ಮೂರು ತಿಂಗಳವರೆಗೆ ಸಂಬಳ ಕೂಡಾ ನೀಡಲಾಗಿದೆ. ಅಲ್ಲದೇ ಭಾರತೀಯ ರೈಲ್ವೇಯಲ್ಲಿನ RPF ಸಿಬ್ಬಂದಿ, TTE ಮತ್ತು ತಂತ್ರಜ್ಞರಂತಹ ಹುದ್ದೆಗಳಲ್ಲಿ ನೇಮಕಗೊಂಡಿರುವಂತೆ ತೋರಿಸಲಾಗಿದೆ.
ತನಿಖೆಯ ಭಾಗವಾಗಿ, ED ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ದೇಶಾದ್ಯಂತ 15 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
Advertisement