

ರಾಯಪುರ: ಛತ್ತೀಸ್ ಗಢದ ಶಾಲೆಯೊಂದರಲ್ಲಿ ನಾಲ್ಕನೇ ತರಗತಿಯ ಅರ್ಧ ವಾರ್ಷಿಕ ಪರೀಕ್ಷೆಯ ಇಂಗ್ಲಿಷ್ ಪತ್ರಿಕೆಯಲ್ಲಿನ ಪ್ರಶ್ನೆಯೊಂದು ವಿವಾದಕ್ಕೆ ಕಾರಣವಾಗಿದೆ. ನಾಯಿ ಹೆಸರು ಏನು ಅಂತಾ ಪ್ರಶ್ನೆ ಕೇಳಿ, ಬಹು ಆಯ್ಕೆಯ ಉತ್ತರದಲ್ಲಿ ‘ರಾಮ್’ ಅಂತಾ ಇರುವುದೇ ಈ ವಿವಾದಕ್ಕೆ ಮೂಲ ಕಾರಣವಾಗಿದೆ.
ಮೋನಾ ನಾಯಿಯ ಹೆಸರನ್ನು ಗುರುತಿಸಲು ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅದರಲ್ಲಿ ರಾಮು ಅಂತಾ ಹೆಸರು ಕೂಡಾ ಇದೆ. ಇದಕ್ಕೆ ಹಿಂದೂ ಬಲಪಂಥೀಯ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದ್ದಾರೆ.
ಮಹಾಸಮುಂಡ್‌ನಲ್ಲಿರುವ ಡಿಇಒ ವಿಜಯ್ ಲಾಂಗೆಹ್ ಅವರ ಕಚೇರಿ ಎದುರು ಜಮಾಯಿಸಿದ್ದ ಪ್ರತಿಭಟನಾಕಾರರು ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ರಾಮ್ ಅಲ್ಲದೇ ಬಾಲಾ, ಶೇರು ಅಂತ ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ ಈ ಪ್ರಶ್ನೆಗಳಿಗೆ ಯಾರೂ ಕೂಡಾ ಚಕಾರವೆತ್ತಲಿಲ್ಲ.
ಈ ಸಂಬಂಧ ದೂರನ್ನು ಸ್ವೀಕರಿಸಿದ್ದು, ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಲಾಂಗೆಹ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಮಹಾಸಮುಂಡ್‌ನಿಂದ ಸುಮಾರು 150 ಕಿಮೀ ದೂರದಲ್ಲಿರುವ ರಾಜನಂದಗಾಂವ್ ಜಿಲ್ಲೆಯಲ್ಲಿ ಅರ್ಧ ವಾರ್ಷಿಕ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಲಾಗಿದೆ. ಕೇಳಲಾದ ಮೂಲ ಪ್ರಶ್ನೆಗಳನ್ನು ಬದಲಾಯಿಸಿದ್ದು, ಇದಕ್ಕೆ ಶಾಲಾ ಶಿಕ್ಷಣ ಇಲಾಖೆ ಜವಾಬ್ದಾರರಲ್ಲ ಎಂದು ಡಿಇಒ ಹೇಳಿದ್ದಾರೆ ಎನ್ನಲಾಗಿದೆ.
ಕೆಲವು ಪೋಷಕರು ನಾಯಿಯ ಹೆಸರಿನ ಆಯ್ಕೆಗಳಲ್ಲಿ 'ರಾಮ' ಹೆಸರು ಇರುವುದಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳಿಗೆ ಇಂತಹ ಅನುಚಿತ ರೀತಿಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಆಯ್ಕೆ ನೀಡುವುದು ಸರಿಯಲ್ಲ ಎಂದಿದ್ದಾರೆ.
Advertisement