

ಚೆನ್ನೈ: ಕಾಲ ಬದಲಾದಂತೆ ಮಾನವೀಯತೆ ಅನ್ನೋದು ಮರೀಚಿಕೆಯಾಗುತ್ತಿದೆ. ಜನರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವ ಜಗತ್ತಿನಲ್ಲಿ ನಾವಿದ್ದೇವೆ. ಹೀಗಾಗಿ ಇಲ್ಲಿ ಯಾರಿಗೂ ಮತ್ತೊಬ್ಬರಿಗೆ ಸಹಾಯ ಮಾಡುವ ಮನಸ್ಸಿಲ್ಲ.. ಸಹಾಯ ಮಾಡುವ ಮನಸ್ಸಿದ್ದರು ಸಮಯವೂ ಇಲ್ಲ.
ಹೀಗಾಗಿ ಎಲ್ಲರೂ ತಮ್ಮ ತಮ್ಮ ಕಷ್ಟಗಳನ್ನೇ ನೆನೆಸಿಕೊಂಡು, ಮತ್ತೊಬ್ಬರು ಕಷ್ಟವನ್ನು ಕಂಡು ಕಣ್ಮುಚ್ಚಿಕೊಂಡು ಹೋಗುತ್ತಾರೆ. ಇಂಥಾ ಸಂದರ್ಭದಲ್ಲಿ ಬ್ಲಿಂಕಿಟ್ (Blinkit) ಸಂಸ್ಥೆಯ ಡೆಲಿವರಿ ಬಾಯ್ ಯೊಬ್ಬರು ತಮ್ಮ ಸಮಯಪ್ರಜ್ಞೆಯಿಂದ ಸಾವಿನ ಸುಳಿಗೆ ಸಿಲುಕಿದ್ದ ಮಹಿಳೆಯೊಬ್ಬರನ್ನು ರಕ್ಷಣೆ ಮಾಡಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಡರಾತ್ರಿ ಬ್ಲಿಂಕಿಟ್ ಆ್ಯಪ್ ಮೂಲಕ ಗ್ರಾಹಕಿಯೊಬ್ಬರು ಮೂರು ಪ್ಯಾಕೆಟ್ 'ಇಲಿ ಪಾಷಾಣ' (Rat Poison) ಆರ್ಡರ್ ಮಾಡಿದ್ದರು. ಸಮಯವಲ್ಲದ ಸಮಯದಲ್ಲಿ ಇಲಿ ಪಾಷಾಣ ಆರ್ಡರ್ ಬಂದಿದ್ದನ್ನು ಕಂಡು ಡೆಲಿವರಿ ಬಾಯ್‌ಗೆ ಅನುಮಾನ ಮೂಡಿದೆ. ತಕ್ಷಣವೇ ಆರ್ಡರ್ ಪಡೆದು ಮಹಿಳೆಯ ವಿಳಾಸಕ್ಕೆ ತೆರಳಿದಾಗ, ಆತನ ಅನುಮಾನ ನಿಜವಾಗಿದೆ.
ಡೆಲಿವರಿ ನೀಡಲು ಹೋದಾಗ ಮನೆಯ ಬಾಗಿಲು ತೆರೆದ ಮಹಿಳೆ ತೀವ್ರವಾಗಿ ಅಳುತ್ತಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಡೆಲಿವರಿ ಬಾಯ್, ಸುಮ್ಮನೆ ಆರ್ಡರ್ ನೀಡಿ ಅಲ್ಲಿಂದ ಹೊರಗೆ ಹೋಗದೆ, ಆಕೆಯ ಬಳಿ ಹೋಗಿ ಮಾತನಾಡಿಸಿದ್ದಾರೆ.
ಸಮಸ್ಯೆ ಏನೇ ಇರಲಿ, ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಜೀವ ಅಮೂಲ್ಯವಾದುದು. ಕಷ್ಟದ ಕ್ಷಣಗಳು ಶಾಶ್ವತವಲ್ಲ, ಅವು ಕಳೆದು ಹೋಗುತ್ತವೆ ಎಂದು ಸಮಾಧಾನಪಡಿಸಿದ್ದಾರೆ.
ಮಹಿಳೆ ಮೊದಲು ತಾನು ಇಲಿಗಳನ್ನು ಕೊಲ್ಲಲು ಇದನ್ನು ತರಿಸಿದ್ದಾಗಿ ಸುಳ್ಳು ಹೇಳಿದರೂ, ಸಮಯಪ್ರಜ್ಞೆ ಮೆರೆದ ಯುವಕ ಅದನ್ನು ನಂಬದೆ. "ನಿಜವಾಗಿಯೂ ಇಲಿ ಕಾಟವಿದ್ದರೆ ಸಂಜೆ ಅಥವಾ ಮರುದಿನ ಆರ್ಡರ್ ಮಾಡುತ್ತಿದ್ದಿರಿ, ಈ ಸಮಯದಲ್ಲಿ ಆರ್ಡರ್ ಮಾಡುವ ಅಗತ್ಯವಿರಲಿಲ್ಲ ಎಂದು ಪ್ರಶ್ನಿಸಿ ಆಕೆಯ ಮನವೊಲಿಸಿದ್ದಾರೆ.
ಬಳಿಕ ಆರ್ಡರ್ ಕ್ಯಾನ್ಸಲ್ ಮಾಡಿ, ವಿಷದ ಪ್ಯಾಕೆಟ್‌ಗಳನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆಯನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಂದು ನಾನು ಏನೋ ಒಂದು ದೊಡ್ಡ ಸಾಧನೆ ಮಾಡಿದ ತೃಪ್ತಿ ಇದೆ ಎಂದು ಬರೆದುಕೊಂಡಿದ್ದಾನೆ. ಸದ್ಯ ಈತನ ಈ ಕಾರ್ಯಕ್ಕೆ ನೆಟ್ಟಿಗರು 'ರಿಯಲ್ ಹೀರೋ' ಎಂದು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
Advertisement