

ತಿರುವನಂತಪುರಂ: ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಸದ್ಯಕ್ಕೆ ಶಾಂತವಾಗಿರಬಹುದು ಆದರೆ ಅನೇಕ ಬೆದರಿಕೆಗಳು ನಿಧಾನವಾಗಿ ಹೊರಹೊಮ್ಮುತ್ತಿದ್ದು, ಭವಿಷ್ಯದಲ್ಲಿ ಅಪಾಯಕಾರಿಯಾಗಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ.
ಮಲಯಾಳಂನ ಪ್ರಮುಖ ಪತ್ರಿಕೆ ಕೇರಳ ಕೌಮುದಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲವು ಸಂಘಟನೆಗಳ ಪಾತ್ರವನ್ನು ಪ್ರಶ್ನಿಸಿದರು ಮತ್ತು ಅವರು ನಿಜವಾಗಿಯೂ ಜನರನ್ನು ಸುರಕ್ಷಿತವಾಗಿರಿಸಲು ಸಾಧ್ಯವೇ? ಸಹಬಾಳ್ವೆಯಲ್ಲಿ ನಂಬಿಕೆಯಿಲ್ಲದವರು ಏಕತೆಯನ್ನು ಹೇಗೆ ಖಚಿತಪಡಿಸಿಕೊಳ್ಳಬಹುದು" ಎಂದು ಶಾ ಕೇಳಿದರು.
PFI, ಜಮಾತ್-ಎ-ಇಸ್ಲಾಮಿಯಂತಹ ಸಂಘಟನೆಗಳು ಮತ್ತು SDPI ಯಂತಹ ರಾಜಕೀಯ ಪಕ್ಷಗಳು ಕೇರಳವನ್ನು ಸುರಕ್ಷಿತವಾಗಿರಿಸಬಹುದೇ? ಎಂದು ಈ ಕಾರ್ಯಕ್ರಮದ ಮೂಲಕ ಕೇರಳದ ಜನರನ್ನು ಕೇಳಲು ಬಯಸುತ್ತೇನೆ ಎಂದರು. ಇಂತಹ ಬೆದರಿಕೆಗಳನ್ನು ಗುರುತಿಸುವುದು ಮತ್ತು ಅವುಗಳನ್ನು ತೊಡೆದುಹಾಕಲು ಪ್ರಯತ್ನಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮೇಲಿನ ನಿಷೇಧವನ್ನು ಉಲ್ಲೇಖಿಸಿದ ಶಾ, ಎಲ್‌ಡಿಎಫ್ ಮತ್ತು ಯುಡಿಎಫ್ ಈ ನಿರ್ಧಾರವನ್ನು ವಿರೋಧಿಸಿಲ್ಲ ಅಥವಾ ಬೆಂಬಲಿಸಿಲ್ಲ. ನಾನು ದೇಶಾದ್ಯಂತ ಎಲ್ಲಿಗೆ ಹೋದರೂ ಇದನ್ನು ಸ್ಪಷ್ಟವಾಗಿ ಹೇಳುತ್ತೇನೆ. ನಾವು PFI ನಿಷೇಧಿಸುವ ಮೂಲಕ ಅದರ ಸಂಪೂರ್ಣ ಕಾರ್ಯಕರ್ತರನ್ನು ಕಂಬಿ ಹಿಂದೆ ಹಾಕಿದ್ದೇವೆ. ಇಡೀ ದೇಶವು ಸುರಕ್ಷಿತವಾಗಿದೆ" ಎಂದು ಗೃಹ ಸಚಿವರು ಹೇಳಿದರು.
ಕಾನೂನು ಸುವ್ಯವಸ್ಥೆ ಹದಗೆಡಿಸುವವರ ಹಿಂದಿನ ಕಾಣದ ಅಪಾಯಕಾರಿ ಜನರನ್ನು ಗುರುತಿಸಿದಾಗ ಮಾತ್ರ ಕೇರಳಕ್ಕೆ ಸುರಕ್ಷತೆ ಖಾತ್ರಿಯಾಗಲಿದೆ. ಅದರೊಂದಿಗೆ ಕೇರಳ ಅಭಿವೃದ್ಧಿಯಾಗಲಿದೆ. ಕೇರಳದ ಸುರಕ್ಷತೆ ಪ್ರಮುಖವಾಗಿದೆ ಎಂದರು.
Advertisement