

ಚೆನ್ನೈ: ನೋಂದಾಯಿತ ಹಣಕಾಸು ಸಲಹೆಗಾರರಾಗದೆ ಷೇರು ಹೂಡಿಕೆ ಸಲಹೆಗಳನ್ನು ನೀಡುತ್ತಿದ್ದ “ಫಿನ್‌ಫ್ಲುಯೆನ್ಸರ್”ಗಳ ವಿರುದ್ಧ ಭಾರತೀಯ ಷೇರುಪೇಟೆ ಮತ್ತು ವಿನಿಮಯ ಮಂಡಳಿ (ಸೆಬಿ) ಕಠಿಣ ಕ್ರಮ ಕೈಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿದ್ದ ಸುಮಾರು 1 ಲಕ್ಷ ವೀಡಿಯೊಗಳನ್ನು ಡಿಲೀಟ್ ಮಾಡಿದೆ.
ಈ ಕುರಿತು ಚೆನ್ನೈನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೆಬಿ ಅಧ್ಯಕ್ಷ ತುಹಿನ್ ಕಾಂತಾ ಪಾಂಡೆ ಅವರು ಮಾಹಿತಿ ನೀಡಿದರು.
ಅನಧಿಕೃತ ಹೂಡಿಕೆ ಸಲಹೆ ನೀಡುವ ವಿಷಯಗಳನ್ನು ಪತ್ತೆಹಚ್ಚಲು “ಸುದರ್ಶನ” ಎಂಬ ಕೃತಕ ಬುದ್ಧಿಮತ್ತೆ (AI) ಆಧಾರಿತ ವ್ಯವಸ್ಥೆಯನ್ನು ಸೆಬಿ ಬಳಕೆ ಮಾಡುತ್ತಿದೆ. ಈ AI ಮಾದರಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಇಂತಹ ವಿಷಯಗಳನ್ನು ಸ್ಕ್ಯಾನ್ ಮಾಡಿ, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ತ್ವರಿತ ಕ್ರಮಕ್ಕೆ ಸಹಕಾರ ನೀಡುತ್ತಿದೆ ಎಂದು ಹೇಳಿದರು.
ಸೆಬಿ ಸದಸ್ಯರು ಹಾಗೂ ಅಧಿಕಾರಿಗಳಿಗೆ ಸಂಬಂಧಿಸಿದ (Conflict of Interest) ವಿಚಾರಗಳ ಪರಿಶೀಲನೆಗಾಗಿ ರಚಿಸಲಾದ ಉನ್ನತ ಮಟ್ಟದ ಸಮಿತಿಯ ಸ್ಥಿತಿಗತಿ ಕುರಿತು ಪ್ರತಿಕ್ರಿಯಿಸಿ, 2025ರ ಡಿಸೆಂಬರ್‌ನಲ್ಲಿ ನಡೆದ ಸೆಬಿ ಮಂಡಳಿ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ. “ಸಾರ್ವಜನಿಕ ಪ್ರಕಟಣೆಗಳ ವ್ಯಾಪ್ತಿ ಸೇರಿದಂತೆ ಕೆಲವು ವಿಷಯಗಳಲ್ಲಿ ಇನ್ನಷ್ಟು ಚರ್ಚೆ ಅಗತ್ಯವಿದೆ ಎಂದು ತಿಳಿಸಿದರು.
ಎಸ್ಎಂಇ ಐಪಿಒಗಳಲ್ಲಿ ಕಂಡುಬರುತ್ತಿರುವ ಅಸ್ಥಿರತೆ ಕುರಿತು ಮಾತನಾಡಿ, ಬೆಲೆ ನಿಗದಿ ಅಥವಾ ಮೌಲ್ಯಮಾಪನದಲ್ಲಿ ಸ್ಥೆ ಹಸ್ತಕ್ಷೇಪ ಮಾಡುವುದಿಲ್ಲ, ಇದರ ಬದಲು ಹೂಡಿಕೆದಾರರಿಗೆ ನೀಡಲಾಗುವ ಮಾಹಿತಿಯ ಗುಣಮಟ್ಟದ ಮೇಲೆ ಗಮನ ಹರಿಸುತ್ತದೆ ಎಂದರು.
ಇತ್ತೀಚೆಗೆ ಜಾಹೀರಾತು ನಿಯಮಗಳನ್ನು ಕಠಿಣಗೊಳಿಸಲಾಗಿದ್ದು, ಇದು ಹೂಡಿಕೆದಾರರಿಗೆ ಹೆಚ್ಚಿನ ಸ್ಪಷ್ಟತೆ ಒದಗಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಹಿಂದೆ ಮುಖ್ಯ ಮಂಡಳಿ ಮತ್ತು ಎಸ್ಎಂಇ ಐಪಿಒಗಳ ನಡುವಿನ ವ್ಯತ್ಯಾಸವನ್ನು ಹೂಡಿಕೆದಾರರು ಗುರುತಿಸುವುದು ಕಷ್ಟವಾಗುತ್ತಿತ್ತು, ಏಕೆಂದರೆ ಪ್ರಮುಖ ವಿವರಗಳು ಜಾಹೀರಾತಿನ ಕೊನೆಯಲ್ಲಿ ಸಣ್ಣ ಅಕ್ಷರಗಳಲ್ಲಿ ನೀಡಲಾಗುತ್ತಿತ್ತು. ಹೊಸ ನಿಯಮಗಳ ಅಡಿಯಲ್ಲಿ, ಐಪಿಒ ಜಾಹೀರಾತುಗಳಲ್ಲಿ ಗಾತ್ರ ಮತ್ತು ಅದು ಯಾವ ವರ್ಗಕ್ಕೆ ಸೇರಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸುವುದು ಕಡ್ಡಾಯ ಮಾಡಲಾಗಿದೆ.
ಇದಲ್ಲದೆ, ಐಪಿಒ ಮಾಹಿತಿ ಹೂಡಿಕೆದಾರರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಪ್ರಾಸ್ಪೆಕ್ಟಸ್‌ನ ಸಂಕ್ಷಿಪ್ತ (ಅಬ್ರಿಡ್ಜ್ಡ್) ಆವೃತ್ತಿಯನ್ನು ಪರಿಚಯಿಸಲು ಸೆಬಿ ಮಂಡಳಿ ಅನುಮೋದನೆ ನೀಡಿದೆ. ಈ ಸಂಕ್ಷಿಪ್ತ ಪ್ರಾಸ್ಪೆಕ್ಟಸ್‌ನಲ್ಲಿ ಐಪಿಒ ಪ್ರಕಾರ ಸೇರಿದಂತೆ ಹೂಡಿಕೆದಾರರ ದೃಷ್ಟಿಯಿಂದ ಅಗತ್ಯವಿರುವ ಎಲ್ಲಾ ಪ್ರಮುಖ ವಿವರಗಳು ಇರಲಿವೆ. ಇದನ್ನು ಕಡ್ಡಾಯಗೊಳಿಸುವ ಅಧಿಸೂಚನೆ ಮುಂದಿನ ಒಂದು ತಿಂಗಳೊಳಗೆ ಹೊರಡಿಸಲಾಗುತ್ತದೆ ಎಂದು ಹೇಳಿದರು.
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ಐಪಿಒ ಕುರಿತುಪ್ರಶ್ನೆಗೆ ಉತ್ತರಿಸಿ, ಈ ತಿಂಗಳ ಅಂತ್ಯದೊಳಗೆ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್'ಗೆ ಐಪಿಒಗಾಗಿ ‘ನೋ ಆಬ್ಜೆಕ್ಷನ್ ಸರ್ಟಿಫಿಕೆಟ್’ (NOC) ನೀಡಲಾಗುವುದು. “ಈ ತಿಂಗಳ ಅಂತ್ಯದೊಳಗೆ NOC ನೀಡುತ್ತೇವೆ. ನಂತರ ಐಪಿಒ ಲಿಸ್ಟಿಂಗ್ ಸೇರಿದಂತೆ ಉಳಿದ ಪ್ರಕ್ರಿಯೆಗಳನ್ನು ಎನ್ಎಸ್ಇ ತಾನೇ ನಿರ್ವಹಿಸಲಿದೆ ಎಂದರು.
Advertisement