

ನವದೆಹಲಿ: ಮಾಜಿ ಉಪ ರಾಷ್ಟ್ರಪತಿ ಜಗದೀಪ್ ಧಂಕರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಎರಡೆರಡು ಬಾರಿ ಪ್ರಜ್ಞೆ ಕಳೆದುಕೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಸೋಮವಾರ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಧಂಕರ್ ಅವರು ಕಳೆದ ವಾರ ಎರಡು ಬಾರಿ ಪ್ರಜ್ಞಾಹೀನರಾಗಿದ್ದರು. ಜನವರಿ 10 ರಂದು, ಅವರು ಶೌಚಾಲಯಕ್ಕೆ ಹೋದಾಗ "ಎರಡು ಬಾರಿ ಪ್ರಜ್ಞಾಹೀನರಾಗಿದ್ದರು. ಹೀಗಾಗಿ ಅವರಿಗೆ ವೈದ್ಯರ ಸಲಹೆ ಮೇರೆಗೆ MRI ಸ್ಕ್ಯಾನ್ ಮಾಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಇಂದು, ವೈದ್ಯರು ಪರೀಕ್ಷೆಗಳಿಗೆ ದಾಖಲಾಗಬೇಕೆಂದು ಒತ್ತಾಯಿಸಿದಾಗ ಅವರು ತಪಾಸಣೆಗಾಗಿ AIIMS ಗೆ ಹೋಗಿದ್ದರು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಧಂಖರ್ ಅವರು ಉಪಾಧ್ಯಕ್ಷರಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ರಾನ್ ಆಫ್ ಕಚ್, ಉತ್ತರಾಖಂಡ, ಕೇರಳ ಮತ್ತು ರಾಷ್ಟ್ರ ರಾಜಧಾನಿ ಸೇರಿದಂತೆ ಈ ಹಿಂದೆ ಹಲವು ಸಂದರ್ಭಗಳಲ್ಲಿ ತಮ್ಮ ಆರೋಗ್ಯ ಸಮಸ್ಯೆ ಮರೆಮಾಚಿದ್ದರು. ಬಳಿಕ ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿ ಜುಲೈ 21 ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈ ಹಿಂದೆಯೂ ಕೂಡ ಅಂದರೆ 2025ರ ಮಾರ್ಚ್ ನಲ್ಲಿ ಧಂಕರ್ ಅವರು ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಸ್ಟೆಂಟ್ ಅನ್ನು ಯಶಸ್ವಿಯಾಗಿ ಅಳವಡಿಸಲಾಗಿತ್ತು. ಬಳಿಕ ಚೇತರಿಸಿಕೊಂಡಿದ್ದ ಅವರನ್ನು ಮಾರ್ಚ್ 12, 2025 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.
Advertisement