

ನವದೆಹಲಿ: ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್ ಸೋಮವಾರ ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಆರು ಗಂಟೆಗಳ ಕಾಲ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ವಿಜಯ್ ಉತ್ತರಿಸಿದ್ದು, ಕಾಲ್ತುಳಿತ ಪ್ರಕರಣಕ್ಕೆ ತಮ್ಮ ಪಕ್ಷ ಅಥವಾ ಅದರ ಪದಾಧಿಕಾರಿಗಳು ಕಾರಣರಲ್ಲ ಎಂದು ಅವರು ತಿಳಿಸಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಕಾರ್ಯಕ್ರಮ ಸ್ಥಳದಲ್ಲಿ ಇದ್ದರೆ ಮತ್ತಷ್ಟು ಗದ್ದಲ, ಗೊಂದಲ ಉಂಟಾಗಬಹುಗು ಎಂದು ಭಾವಿಸಿ ಅಲ್ಲಿಂದ ತೆರಳಿದ್ದಾಗಿ ಅವರು ಹೇಳಿರುವುದಾಗಿ ತಿಳಿದುಬಂದಿದೆ.
ಈ ಹಿಂದೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪದಾಧಿಕಾರಿಗಳನ್ನು ಪ್ರಶ್ನಿಸಿದಾಗಲೂ ಇದೇ ರೀತಿಯ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮಕ್ಕೆ ಬರುವುದರಲ್ಲಿ ವಿಜಯ್ ತಡಮಾಡಿದ್ದರಿಂದ ಕಾಲ್ತುಳಿತ ಉಂಟಾಯಿತು ಎಂದು ಪೊಲೀಸರು ಹೇಳಿಕೊಂಡಿದ್ದರು.
ಆ ಹೇಳಿಕೆಗಳನ್ನು ಈಗ ವಿಜಯ್ ಅವರ ಹೇಳಿಕೆಯೊಂದಿಗೆ ವಿಶ್ಲೇಷಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಸೆಪ್ಟೆಂಬರ್ 27, 2025 ರಂದು ಸಂಭವಿಸಿದ್ದ ಕರೂರ್ ಕಾಲ್ತುಳಿತ ಪ್ರಕರಣದಲ್ಲಿ 41 ಜನರು ಸಾವನ್ನಪ್ಪಿದ್ದರು.
60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಈ ತಿಂಗಳ ಆರಂಭದಲ್ಲಿ ಸಮನ್ಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ನವದೆಹಲಿಗೆ ಇಂದು ಭಾರಿ ಭದ್ರತೆಯೊಂದಿಗೆ ತೆರಳಿದ ವಿಜಯ್,ಸಿಬಿಐನ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
Advertisement