

ಚೆನ್ನೈ: ರೈತನ ಮಗನಾಗಿರುವುದಕ್ಕೆ ಹೆಮ್ಮೆಯಿದೆ. ನಿಮ್ಮ ರಾಜಕೀಯ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರು ಸೋಮವಾರ ಹೇಳಿದ್ದು, ಈ ಮೂಲಕ ರಾಜ್ ಠಾಕ್ರೇ ‘ರಸ್ಮಲೈ’ ವ್ಯಂಗ್ಯಕ್ಕೆ ತಿರುಗೇಟು ನೀಡಿದ್ದಾರೆ.
ಮುಂಬೈನಲ್ಲಿ ನಡೆದ ಎಂಎನ್‌ಎಸ್–ಶಿವಸೇನಾ (ಯುಬಿಟಿ) ಸಂಯುಕ್ತ ರ್ಯಾಲಿಯಲ್ಲಿ ರಾಜ್ ಠಾಕ್ರೆ ಅವರು ಮಾಡಿರುವ ಅಪಹಾಸ್ಯ ಕುರಿತು ಅನ್ನಾಮಲೈ ಅವರು ತಿರುಗೇಟು ನೀಡಿದ್ದಾರೆ.
ನನ್ನನ್ನು ಬೆದರಿಸಲು ಆದಿತ್ಯ ಠಾಕ್ರೇ ಮತ್ತು ರಾಜ್ ಠಾಕ್ರೇ ಯಾರು?...ರೈತನ ಮಗನಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ರಾಜಕೀಯ ಬೆದರಿಕೆಗಳಿಗೆ ಭಯಪಡುವ ವ್ಯಕ್ತಿ ನಾನಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮುಂಬೈಗೆ ಕಾಲಿಟ್ಟರೆ, ಕಾಲು ಕತ್ತರಿಸುವುದಾಗಿ ಬಂದಿರುವ ಸಾಮಾಜಿಕ ಜಾಲತಾಣಗಳಲ್ಲಿನ ಬೆದರಿಕೆ ಪೋಸ್ಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಮುಂಬೈಗೆ ಬರುತ್ತೇನೆ. ಧೈರ್ಯವಿದ್ದರೆ ಕಾಲು ಕತ್ತರಿಸಿ ನೋಡಿ. ಇಂತಹ ಬೆದರಿಕೆಗಳಿಗೆ ಭಯಪಡುವವನಾಗಿದ್ದರೆ ನಾನು ನನ್ನ ಹಳ್ಳಿಯಲ್ಲೇ ಇದ್ದಿರುತ್ತಿದ್ದೆ ಎಂದು ಸವಾಲು ಹಾಕಿದ್ದಾರೆ.
ಮರಾಠಿಗರನ್ನು ಅವಮಾನಿಸಿದ್ದಾರೆಂಬ ಆರೋಪವನ್ನು ನಿರಾಕರಿಸಿದ ಅವರು, ಕಾಮರಾಜ್ ಅವರು ಭಾರತದ ಮಹಾನ್ ನಾಯಕರಲ್ಲಿ ಒಬ್ಬರು ಎಂದು ಹೇಳಿದರೆ ಅವರು ತಮಿಳಿಗನಲ್ಲವೇ? ಮುಂಬೈ ವಿಶ್ವದರ್ಜೆಯ ನಗರ ಎಂದು ಹೇಳಿದರೆ ಅದನ್ನು ಮರಾಠಿಗಳು ನಿರ್ಮಿಸಲಿಲ್ಲವೇ?ಎಂದು ಪ್ರಶ್ನಿಸಿದರು.
ಇದೇ ವೇಳೆ ಮುಂಬೈನ ಅಭಿವೃದ್ಧಿಯಲ್ಲಿ ಮರಾಠಿ ಜನರ ಪಾತ್ರ ಅಮೂಲ್ಯ ಎಂದು ಒತ್ತಿ ಹೇಳಿದ ಅನ್ನಾಮಲೈ, ತಮ್ಮ ವಿರುದ್ಧ ಟೀಕೆ ಮಾಡುತ್ತಿರುವವರನ್ನು ‘ಅಜ್ಞಾನಿಗಳು’ ಎಂದು ಕರೆದರು.
ನನ್ನನ್ನು ಅವಮಾನಿಸುವ ವೇಳೆ ತಮಿಳಿಗರನ್ನೂ ಅವಮಾನಿಸಲಾಗುತ್ತಿದೆ. ಧೋತಿ, ಲುಂಗಿ ಉಡುಪಿನ ಉಲ್ಲೇಖಗಳ ಮೂಲಕ ತಮಿಳರನ್ನೇ ಅವಮಾನಿಸಲಾಗುತ್ತಿದೆ ಎಂದು ಆರೋಪಿಸಿದರು.
ನನ್ನನ್ನು ಅವಮಾನಿಸುವುದು ಹೊಸದೇನಲ್ಲ. ಆದರೆ, ಈಗ ತಮಿಳರನ್ನು ಸಮೂಹವಾಗಿ ಅವಮಾನಿಸಲಾಗುತ್ತಿದೆ. ಕೈ, ಕಾಲು ಕತ್ತರಿಸುತ್ತೇವೆಂದು ರಾಜಕೀಯ ಬೆದರಿಕೆ ಹಾಕುವವರಿಗೆ ನಾನು ಭಯಪಡುವುದಿಲ್ಲ ಎಂದು ಸವಾಲು ಹಾಕಿದರು.
Advertisement