

ನವದೆಹಲಿ: ಕರೂರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಬಿಐ ವಿಚಾರಣೆ ಎದುರಿಸಿದ ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್ ಅವರಿಗೆ ಮತ್ತೆ ಜನವರಿ 19 ರಂದು 2ನೇ ಸುತ್ತಿನ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸಮನ್ಸ್ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಸಿಬಿಐ ಕೇಂದ್ರ ಕಚೇರಿಯಲ್ಲಿ ಆರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಗಾದ ವಿಜಯ್ ಗೆ ಮಂಗಳವಾರ ಮತ್ತೆ ಬರುವಂತೆ ಸೂಚಿಸಲಾಗಿದೆ. ಆದರೆ ಪೊಂಗಲ್ ಹಬ್ಬವನ್ನು ಉಲ್ಲೇಖಿಸಿ ಮತ್ತೊಂದು ದಿನಾಂಕಕ್ಕೆ ವಿಜಯ್ ಮನವಿ ಮಾಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಈ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಎಸ್ ಡೇವಿಡ್ಸನ್ ದೇವಾಶಿರ್ವತಂ ಅವರನ್ನು ಕೂಡ ಸಿಬಿಐ ಸೋಮವಾರ ವಿಚಾರಣೆಗೆ ಒಳಪಡಿಸಿದೆ. ಸಿಬಿಐ ಇದುವರೆಗೆ ಹಲವಾರು ಟಿವಿಕೆ ಪದಾಧಿಕಾರಿಗಳು, ವಿಜಯ್ ಅವರ ಚಾಲಕ ಮತ್ತು ಕೆಲವು ಪೊಲೀಸ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ನಂತರ ಸಿಬಿಐ ಎಸ್‌ಐಟಿಯಿಂದ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ತಮಿಳುನಾಡಿನ ಕರೂರ್‌ನಲ್ಲಿ ಕಳೆದ ವರ್ಷ ಸೆಪ್ಟೆಂಬರ್ 27 ರಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ್ದರು. 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ತನಿಖೆಯನ್ನು ವಹಿಸಿಕೊಳ್ಳಲು ಹಿರಿಯ ಅಧಿಕಾರಿಯನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ ಸಿಬಿಐ ನಿರ್ದೇಶಕರಿಗೆ ಸೂಚಿಸಿತ್ತು. ಸಿಬಿಐ ತನಿಖೆಯ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಅಜಯ್ ರಸ್ತೋಗಿ ನೇತೃತ್ವದ ಮೂರು ಸದಸ್ಯರ ಮೇಲ್ವಿಚಾರಣಾ ಸಮಿತಿಯನ್ನು ಸಹ ನ್ಯಾಯಾಲಯ ರಚಿಸಿದೆ.
ಕಾಲ್ತುಳಿತವು ದೇಶಾದ್ಯಂತ ನಾಗರಿಕರ ಮನಸ್ಸಿನಲ್ಲಿ ಆತಂಕ ಮೂಡಿಸಿದೆ ಎಂದು ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಎನ್ ವಿ ಅಂಜಾರಿಯಾ ಅವರನ್ನೊಳಗೊಂಡ ನ್ಯಾಯ ಪೀಠ ಹೇಳಿದೆ.
Advertisement