

ಭಾರತೀಯ ಜನತಾ ಪಕ್ಷ (BJP) ತನ್ನ ಆಡಳಿತ ಮತ್ತು ಅಭಿವೃದ್ಧಿಯ ದಾಖಲೆಯಿಂದಾಗಿ ದೇಶಾದ್ಯಂತ ಮತದಾರರ ಮೊದಲ ಆಯ್ಕೆಯಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಅಸ್ಸಾಂನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ದಶಕಗಳ ಕಾಲದ ಆಡಳಿತದಲ್ಲಿ ಮತಗಳಿಗೆ ಪ್ರತಿಯಾಗಿ ಕಾಂಗ್ರೆಸ್ ರಾಜ್ಯದಲ್ಲಿ ಭೂಮಿಯನ್ನು ನುಸುಳುಕೋರರಿಗೆ ಹಸ್ತಾಂತರಿಸಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರಗಳ ಅಡಿಯಲ್ಲಿ ಅಕ್ರಮ ವಲಸೆ ಹೆಚ್ಚಾಗಿದ್ದು, ಅರಣ್ಯಗಳು, ವನ್ಯಜೀವಿ ಕಾರಿಡಾರ್‌ಗಳು ಮತ್ತು ಸಾಂಪ್ರದಾಯಿಕ ಸಂಸ್ಥೆಗಳ ಮೇಲೆ ಅತಿಕ್ರಮಣಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.
ಭೂಮಿಯನ್ನು ಅತಿಕ್ರಮಿಸಿದ್ದ ನುಸುಳುಕೋರರನ್ನು ಹೊರಹಾಕುವ ಮೂಲಕ ಬಿಜೆಪಿ ಸರ್ಕಾರ ಅಸ್ಸಾಂನ ಗುರುತು ಮತ್ತು ಸಂಸ್ಕೃತಿಯನ್ನು ರಕ್ಷಿಸುತ್ತಿದೆ. ಕಾಂಗ್ರೆಸ್ ಜನರ ನಂಬಿಕೆಯನ್ನು ಕಳೆದುಕೊಂಡಿದೆ, ಮತದಾರರು ಸ್ಥಿರತೆ ಮತ್ತು ಅಭಿವೃದ್ಧಿಗಾಗಿ ಬಿಜೆಪಿಯ ಮೇಲೆ ವಿಶ್ವಾಸ ಇಡುವುದನ್ನು ಮುಂದುವರೆಸಿದ್ದಾರೆ ಎಂದರು.
ಇತ್ತೀಚಿನ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿ ಮೋದಿ, 20 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದಾಖಲೆಯ ಮತಗಳು ಮತ್ತು ಸ್ಥಾನಗಳನ್ನು ಗಳಿಸಿದೆ ಎಂದು ಹೇಳಿದರು. ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕ್ಷಮತೆಯನ್ನು ತೋರಿಸಿದರು. ಕೇರಳದಲ್ಲಿ ಬಿಜೆಪಿ ಈಗ ಮೇಯರ್ ನ್ನು ಹೊಂದಿದೆ ಎಂದು ಹೇಳಿದರು.
ಭಾರತದಾದ್ಯಂತ ಜನರು ಉತ್ತಮ ಆಡಳಿತ ಮತ್ತು ಅಭಿವೃದ್ಧಿಗಾಗಿ ಬಿಜೆಪಿಯನ್ನು ನಂಬುತ್ತಾರೆ ಎಂಬುದನ್ನು ಈ ಫಲಿತಾಂಶಗಳು ತೋರಿಸುತ್ತವೆ ಎಂದರು.
Advertisement