

ಲಖನೌ: ದೆಹಲಿಯಿಂದ ಪಶ್ಚಿಮ ಬಂಗಾಳದ ಬಾಗ್ಡೋಗ್ರಾಗೆ ಹೋಗುತ್ತಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನಕ್ಕೆ ಭಾನುವಾರ ಬೆಳಗ್ಗೆ ಬಾಂಬ್ ಬೆದರಿಕೆ ಬಂದಿದ್ದು, ಪೈಲಟ್ ವಿಮಾನವನ್ನು ಲಖನೌ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ.
ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಪ್ರಾಥಮಿಕ ತಪಾಸಣೆಯ ಸಮಯದಲ್ಲಿ, ಭದ್ರತಾ ಸಿಬ್ಬಂದಿ "ಪ್ಲೇನ್ ಮೇ ಬಾಂಬ್"(ವಿಮಾನದಲ್ಲಿ ಬಾಂಬ್) ಎಂದು ಬರೆದಿರುವ ಟಿಶ್ಯೂ ಪೇಪರ್‌ನಲ್ಲಿ ಕೈಬರಹದಲ್ಲಿ ಬರೆದಿದ್ದ ಟಿಪ್ಪಣಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಡಿಗೋ ವಿಮಾನ 6E-6650 ಇಂದು ಬೆಳಗ್ಗೆ 7.46 ಕ್ಕೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತು. ಬೆಳಗ್ಗೆ 8.46 ಕ್ಕೆ ವಾಯು ಸಂಚಾರ ನಿಯಂತ್ರಣಕ್ಕೆ ಬೆದರಿಕೆ ಬಗ್ಗೆ ಮಾಹಿತಿ ಬಂದ ನಂತರ ಎಂಟು ಮಕ್ಕಳು ಮತ್ತು ಇಬ್ಬರು ಪೈಲಟ್‌ಗಳು ಹಾಗೂ ಐದು ಸಿಬ್ಬಂದಿ ಸೇರಿದಂತೆ 222 ಪ್ರಯಾಣಿಕರನ್ನು ಹೊತ್ತ ವಿಮಾನವು ಬೆಳಗ್ಗೆ 9.17 ರ ಸುಮಾರಿಗೆ ಲಖನೌನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ವಿಮಾನವನ್ನು ತಕ್ಷಣವೇ ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಬಾಂಬ್ ನಿಷ್ಕ್ರಿಯ ದಳ, ಭದ್ರತಾ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳು ವ್ಯಾಪಕ ತಪಾಸಣೆ ನಡೆಸಿದರು.
Advertisement