ಕಣ್ಮರೆಯಾದ ಮನುಷ್ಯತ್ವ: ಕಟ್ಟಡದ ಗುಂಡಿಗೆ ಬಿದ್ದು ಜೀವ ಉಳಿಸಿಕೊಳ್ಳಲು 2 ಗಂಟೆ ಒದ್ದಾಡಿದ ಟೆಕ್ಕಿ, 'ವಿಡಿಯೋ' ಮಾಡುತ್ತಿದ್ದ ಜನರು!

ಸೆಕ್ಟರ್ 150ಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ದಟ್ಟ ಮಂಜಿನ ಪರಿಣಾಮ ರಸ್ತೆ ಕಾಣದೇ ಕಾರು ಸಮೇತ ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು 27 ವರ್ಷದ ಟೆಕ್ಕಿ ಯುವರಾಜ್ ಮೆಹ್ತಾ ಸಾವನ್ನಪ್ಪಿದ್ದಾರೆ. ತನ್ನ ಪುತ್ರನ ಸಾವಿನ ಅಂತಿಮ ಕ್ಷಣದ ಪರಿಸ್ಥಿತಿ ಹೇಳಿಕೊಂಡು ತಂದೆ ಕಣ್ಣೀರು ಹಾಕಿದ್ದಾರೆ.
Yuvaraj and  Rajkumar Mehta
ಟೆಕ್ಕಿ ಯುವರಾಜ್ ಮೆಹ್ತಾ ಹಾಗೂ ಅವರ ತಂದೆ ರಾಜ್‌ಕುಮಾರ್ ಮೆಹ್ತಾ
Updated on

ನೋಯ್ಡಾ: ಇತ್ತೀಚಿನ ದಿನಗಳಲ್ಲಿ ಮಾನವೀಯತೆ, ಮನುಷ್ಯತ್ವ ಎಂಬುದು ತನ್ನ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಸಾಯುತ್ತ ಇದ್ದರೂ ಯಾರೂ ಕೂಡಾ ನೆರವಿಗೆ ಬರುವುದಿಲ್ಲ. ಇಂತಹುದೇ ಘಟನೆ ನೋಯ್ಡಾದಲ್ಲಿ ನಡೆದಿದೆ.

ಸೆಕ್ಟರ್ 150ಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ದಟ್ಟ ಮಂಜಿನ ಪರಿಣಾಮ ರಸ್ತೆ ಕಾಣದೇ ಕಾರು ಸಮೇತ ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು 27 ವರ್ಷದ ಟೆಕ್ಕಿ ಯುವರಾಜ್ ಮೆಹ್ತಾ ಸಾವನ್ನಪ್ಪಿದ್ದಾರೆ. ತನ್ನ ಪುತ್ರನ ಸಾವಿನ ಅಂತಿಮ ಕ್ಷಣದ ಪರಿಸ್ಥಿತಿ ಹೇಳಿಕೊಂಡು ತಂದೆ ಕಣ್ಣೀರು ಹಾಕಿದ್ದಾರೆ.

ನನ್ನ ಮಗ, ಕಟ್ಟಡದ ಗುಂಡಿಗೆ ಬಿದ್ದು ಜೀವ ಉಳಿಸಿಕೊಳ್ಳಲು ಹರಸಾಹಸಪಟ್ಟಿದ್ದಾನೆ. ಸಹಾಯಕ್ಕಾಗಿ ಅರಚಿದ್ದಾನೆ. ತನನ್ನು ಬದುಕಿಸುವಂತೆ ಅಲ್ಲಿದ್ದ ಜನರನ್ನು ಕೇಳಿಕೊಂಡಿದ್ದಾನೆ. ಆದರೆ, ಅಲ್ಲಿದ್ದವರು ಸುಮ್ಮನೆ ನಿಂತಿದ್ದಾರೆ. ಕೆಲವರು ಅದನ್ನು ವಿಡಿಯೋ ಮಾಡಿದ್ದಾರೆ. ನನ್ನ ಮಗ ಜೀವ ಉಳಿಸಿಕೊಳ್ಳಲು ಸುಮಾರು 2 ಗಂಟೆಗಳ ಕಾಲ ಪರದಾಡಿದ್ದಾನೆ. ಆದರೂ ಯಾರೂ ಕೂಡಾ ಆತನ ನೆರವಿಗೆ ಬಂದಿಲ್ಲ, ಪ್ರಾಣ ರಕ್ಷಣೆಗೆ ಮುಂದಾಗಿಲ್ಲ ಎಂದು ಮೃತನ ತಂದೆ ರಾಜ್‌ಕುಮಾರ್ ಮೆಹ್ತಾ ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ.

ಗುಂಡಿಗೆ ಇಳಿಯದ ರಕ್ಷಣಾ ಸಿಬ್ಬಂದಿ: ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಅಲ್ಲಿಯೇ ಇದ್ದರೂ ಯಾರೂ ತಕ್ಷಣ ಗುಂಡಿಗೆ ಇಳಿಯಲಿಲ್ಲ. ಸಮೀಪದಲ್ಲಿದ್ದ ಕೆಲವರು ನೆರವಿಗೆ ಪ್ರಯತ್ನಿಸಿದ್ದಾರೆ. ಆದರೆ ಏನೇ ಮಾಡಿದ್ದರೂ ನನ್ನ ಮಗನನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಗುಂಡಿಯೊಳಗೆ ಕೊರೆಯುವ ನೀರು ಹಾಗೂ ಕಬ್ಬಿಣದ ರಾಡುಗಳಿವೆ ಎಂದು ಹೇಳಿ ರಕ್ಷಣಾ ಸಿಬ್ಬಂದಿ ಗುಂಡಿಯೊಳಗೆ ಇಳಿಯಲು ನಿರಾಕರಿಸಿದರು. ತಜ್ಞ ಮುಳುಗು ತಜ್ಞರು ಗುಂಡಿಯೊಳಗೆ ಹೋಗಿದ್ದರೆ ಬಹುಶಃ ನನ್ನ ಮಗನನ್ನು ಉಳಿಸಬಹುದಿತ್ತು ಎಂದು ಅವರು ಹೇಳಿದರು.

ಸೆಕ್ಟರ್ 150ಯಲ್ಲಿ ಮೆಹ್ತಾ ಕಾರಿನಲ್ಲಿ ತೆರಳುತ್ತಿದ್ದಾಗ ದಟ್ಟ ಮಂಜಿನ ಪರಿಣಾಮ ರಸ್ತೆ ಕಾಣದೇ ಕಾರು ಸಮೇತ ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಈ ಅಪಘಾತ ಸಂಭವಿಸಿದೆ. ಹೇಗೂ ತನ್ನ ತಂದೆಗೆ ಕರೆ ಮಾಡಿದ್ದ ಮೆಹ್ತಾ, ಅಪ್ಪ ನನಗೆ ಸಾಯಲು ಇಷ್ಟವಿಲ್ಲ. ದಯವಿಟು ಬಂದು ಕಾಪಾಡು ಅಂತಾ ಹೇಳಿದ್ದರು. ನಂತರ ಕರೆ ಸ್ಥಗಿತಗೊಂಡಿತ್ತು. ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಇಂತಹ ಘಟನೆ ಮತ್ತೆ ನಡೆಯದಂತೆ ಸಂಪೂರ್ಣ ವ್ಯವಸ್ಥೆ ಮಾಡಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಗುರುಗ್ರಾಮ್ ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೆಹ್ತಾ ಅವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ದಟ್ಟ ಮಂಜಿನ ನಡುವೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ಇಲಾಖೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಸ್ಥಳೀಯ ಪೊಲೀಸರ ತಂಡಗಳು ಶೋಧ ಕಾರ್ಯಾಚರಣೆಯ ನಂತರ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ.

ರಕ್ಷಣಾ ಪ್ರಯತ್ನ ವಿಳಂಬವಾಯಿತು. ಹೆಚ್ಚು ತ್ವರಿತವಾಗಿ ಕೈಗೊಂಡಿದ್ದರೆ ಮೆಹ್ತಾ ಬದುಕುಳಿಯುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ, ಡೆಲಿವರಿ ಏಜೆಂಟ್ ಹೇಳಿದರು. ಮತ್ತೊಂದೆಡೆ ಅಪಘಾತ ಸಂಭವಿಸಿದ ಸ್ಥಳದಲ್ಲಿ ಅಸಮರ್ಪಕ ಬ್ಯಾರಿಕೇಡ್‌ಗಳು ಮತ್ತು ರಿಫ್ಲೆಕ್ಟರ್‌ಗಳ ಕೊರತೆಯಿದೆ ಎಂದು ಆರೋಪಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಈ ಘಟನೆ ಬಳಿಕ ನೋಯ್ಡಾ ಪ್ರಾಧಿಕಾರ ಜೂನಿಯರ್ ಇಂಜಿನಿಯರ್‌ ನನ್ನು ಸೇವೆಯಿಂದ ಅಮಾನತುಗೊಳಿಸಿದೆ. ಆ ಪ್ರದೇಶದಲ್ಲಿ ಟ್ರಾಫಿಕ್ ಸಂಬಂಧಿತ ಕೆಲಸಗಳಿಗೆ ಕಾರಣವಾದ ಇತರ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿದೆ.

Yuvaraj and  Rajkumar Mehta
'ಅಪ್ಪಾ ನನಗೆ ಸಾಯೋಕೆ ಇಷ್ಟವಿಲ್ಲ': ನೀರಿನ ಹೊಂಡಕ್ಕೆ ಬಿದ್ದ ಟೆಕ್ಕಿ ಕರೆ, ಡೆಲಿವರಿ ಏಜೆಂಟ್ ಹರಸಾಹಸವೂ ವ್ಯರ್ಥ!

ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಎಂ, ಪ್ರಕರಣದಲ್ಲಿ ಕಠಿಣ ಕ್ರಮಕ್ಕೆ ಆದೇಶಿಸಿದ್ದು, ನೋಯ್ಡಾ ಟ್ರಾಫಿಕ್ ಘಟಕದ ಜೂನಿಯರ್ ಇಂಜಿನಿಯರ್ ನವೀನ್ ಕುಮಾರ್ ಅವರ ಸೇವೆಯನ್ನು ತಕ್ಷಣವೇ ವಜಾಗೊಳಿಸುವಂತೆ ಸೂಚಿಸಿದ್ದಾರೆ. ಅಲ್ಲದೇ ಸೆಕ್ಟರ್ 150 ಮತ್ತು ಸುತ್ತಮುತ್ತಲಿನ ಸಂಚಾರ ನಿರ್ವಹಣೆಯ ಜವಾಬ್ದಾರಿಯುತ ಇತರ ಸಂಬಂಧಿತ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ.

ಕಟ್ಟಡಗಳ ನಿರ್ಮಾಣ ಮತ್ತು ಹಂಚಿಕೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಿಇಒ ಅವರು ಸಂಬಂಧಪಟ್ಟ ಇಲಾಖೆಗಳಿಂದ ವಿವರವಾದ ವರದಿಗಳನ್ನು ಕೇಳಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಆಯಾ ಪ್ರದೇಶಗಳಲ್ಲಿ ನಡೆಯುತ್ತಿರುವ ನಿರ್ಮಾಣ ಯೋಜನೆಗಳಲ್ಲಿ ಸುರಕ್ಷತಾ ಕ್ರಮ ಮರುಪರಿಶೀಲಿಸುವಂತೆ ಎಲ್ಲಾ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com