ಉತ್ತರ ಪ್ರದೇಶ: ಮದುವೆಯಾಗಿ ಬಿಟ್ಟು ಹೋಗಿದ್ದಕ್ಕೆ ಸೇಡು, 'ಮಹಿಳಾ ಆಟೋ ರಿಕ್ಷಾ' ಚಾಲಕಿ ಕೊಲೆ!
ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಇತ್ತೀಚಿಗೆ ನಡೆದ ಮೊದಲ ಮಹಿಳಾ ಆಟೋ ಚಾಲಕಿ ಮರ್ಡರ್ ಹಿಂದೆ ಪ್ರೇಮ ಪ್ರಕರಣ, ದ್ರೋಹ, ಸೇಡಿನ ಜ್ವಾಲೆ ಕಾರಣ ಎಂಬುದು ತಿಳಿದುಬಂದಿದೆ. ಕಳೆದ ವಾರ ನಡೆದ ಕೊಲೆಗೆ ಸಂಬಂಧಿಸಿದಂತೆ ಇಬ್ಬರನ್ನು ಈಗಾಗಲೇ ಬಂಧಿಸಲಾಗಿತ್ತು. ಆದರೆ ಮಧ್ಯರಾತ್ರಿ ಪೊಲೀಸರು ನಡೆಸಿದ ಎನ್‌ಕೌಂಟರ್ ನಲ್ಲಿ ಪ್ರಮುಖ ಆರೋಪಿಯನ್ನು ಬಂಧಿಸಿದ ನಂತರವೇ ಪ್ರಕರಣ ಬಯಲಾಗಿದೆ.
ಆರೋಪಿ ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿದ್ದಾನೆ. ಕೊಲೆಯಾದ ಮಹಿಳೆ ಜೊತೆಗೆ ಮದುವೆಯಾಗಿತ್ತು. ಆದರೆ ಆಕೆ ಬಿಟ್ಟು ಹೋಗಿದ್ದಳು. ದ್ರೋಹಕ್ಕೆ ಸೇಡು ತೀರಿಸಿಕೊಳ್ಳಲು ವೆಡ್ಡಿಂಗ್ ಅನಿವರ್ಸರಿಯ ರಾತ್ರಿಯನ್ನು ಆಯ್ಕೆಮಾಡಿ ಆಕೆಯನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.
ಜನವರಿ 4 ರ ರಾತ್ರಿ, ಝಾನ್ಸಿಯ ಮೊದಲ ಮಹಿಳಾ ಆಟೋ ರಿಕ್ಷಾ ಡ್ರೈವರ್ ಅನಿತಾ ಚೌಧರಿ ಅವರನ್ನು ಝಾನ್ಸಿಯ ನವಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಸಕುನ್ವಾ ಧುಕ್ವಾನ್ ಕಾಲೋನಿ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆಕೆಯ ರಕ್ತಸಿಕ್ತ ದೇಹ ರಸ್ತೆಯ ಮೇಲೆ ಬಿದ್ದಿತ್ತು. ಆಕೆಯ ಪಲ್ಟಿಯಾದ ಆಟೋ ರಿಕ್ಷಾ ಕೂಡಾ ಇಲ್ಲಿಯೇ ಇತ್ತು.
ಆಕೆಯ ಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮುಖೇಶ್ ಝಾ, ಶಿವಂ ಮತ್ತು ಮನೋಜ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಿವಂ ಮತ್ತು ಮನೋಜ್ ಅವರನ್ನು ಪೊಲೀಸರು ತಕ್ಷಣ ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಪ್ರಮುಖ ಆರೋಪಿ ಮುಖೇಶ್ ಝಾ ತಲೆಮರೆಸಿಕೊಂಡಿದ್ದ. ಕಳೆದ ರಾತ್ರಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆತನನ್ನು ಬಂಧಿಸಲಾಗಿದೆ. ಆತನಿಂದ ಪಿಸ್ತೂಲ್ ಮತ್ತು ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರೀತಿ ಮತ್ತು ದ್ರೋಹದ ಕಥೆ: ಝಾ ಮತ್ತು ಚೌಧರಿ ಸುಮಾರು ಆರು ಅಥವಾ ಏಳು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಇವರ ದಾಂಪತ್ಯ ಜೀವನ ಹೆಚ್ಚಿನ ದಿನ ಇರಲಿಲ್ಲ. ಆತನನ್ನು ಆಕೆ ಬಿಟ್ಟುಹೋಗಿದ್ದಳು ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಪ್ರೀತಿ ಸಿಂಗ್ ಹೇಳಿದ್ದಾರೆ.
ಆಕೆಯ ಅಗಲಿಕೆ ತಾಳಲಾರದೆ ಝಾ ಚೌಧರಿಯ ಕೊಲೆಗೆ ಆರೋಪಿ ಯೋಜನೆ ರೂಪಿಸಿದ್ದ. ಇದಕ್ಕಾಗಿ ಅನಿವರ್ಸರಿಯ ದಿನವನ್ನು ಆಯ್ಕೆ ಮಾಡಿಕೊಂಡಿದ್ದ. ಆಕೆ ಆಟೋ ರಿಕ್ಷಾ ಚಲಾಯಿಸುತ್ತಿದ್ದಾಗ ಗುಂಡಿಟ್ಟು ಹತ್ಯೆಗೈದಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.

