

ಮುಂಬೈ: ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ಮಹಾಯುತಿ ಭರ್ಜರಿ ಗೆಲುವು ಸಾಧಿಸಿದ್ದು, ಮಹಾರಾಷ್ಟ್ರದಲ್ಲಿ ರೆಸಾರ್ಟ್ ರಾಜಕೀಯ ಆರಂಭವಾಗಿದೆ. ಆಡಳಿತಾರೂಢ ಮಿತ್ರ ಪಕ್ಷ ಶಿವಸೇನೆಯಿಂದ ಆಯ್ಕೆಯಾದ ಕಾರ್ಪೊರೇಟರ್‌ಗಳನ್ನು ಹೋಟೆಲ್‌ಗಳಿಗೆ ಏಕೆ ಸ್ಥಳಾಂತರಿಸಿದ್ದಾರೆ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.
ಇತ್ತೀಚಿನ ನಾಗರಿಕ ಚುನಾವಣೆಯಲ್ಲಿನ ಜನಾದೇಶದ ಪ್ರಕಾರ ಯಾವುದೇ ಪಕ್ಷವು ಬಿಎಂಸಿ ಮೇಯರ್ ಹುದ್ದೆಗೆ ಸುಲಭವಾಗಿ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ಇತ್ತೀಚೆಗೆ ಮುಕ್ತಾಯಗೊಂಡ ನಾಗರಿಕ ಚುನಾವಣೆಯಲ್ಲಿ, ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟವು 227 ಸದಸ್ಯರ ಬಿಎಂಸಿಯಲ್ಲಿ ಸ್ಪಷ್ಟ ಬಹುಮತವನ್ನು ಗಳಿಸಿದೆ. ಕ್ರಮವಾಗಿ 89 ಮತ್ತು 29 ಸ್ಥಾನಗಳನ್ನು ಪಡೆದಿದೆ. ಉದ್ಧವ್ ಠಾಕ್ರೆ ನೇತೃತ್ವದ ಸೇನಾ (ಯುಬಿಟಿ) 65 ಸ್ಥಾನಗಳನ್ನು ಗೆದ್ದರೆ, ಅದರ ಮಿತ್ರ ಪಕ್ಷ ಎಂಎನ್‌ಎಸ್ ಆರು ಸ್ಥಾನಗಳಲ್ಲಿ ಜಯಗಳಿಸಿತು.
ಶಿವಸೇನೆ ತನ್ನ 29 ಸದಸ್ಯರನ್ನು ಮುಂಬೈನ ಹೋಟೆಲ್‌ಗೆ ಸ್ಥಳಾಂತರಿಸಿದೆ, ದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾದ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಕಾರ್ಯನಿರ್ವಹಣೆಯ ಬಗ್ಗೆ ಅವರಿಗೆ ಅರಿವು ಮೂಡಿಸಲು ಒಂದು ಓರಿಯಂಟೇಶನ್ ಕಾರ್ಯಾಗಾರಕ್ಕಾಗಿ ಹೋಟೆಲ್ ಗೆ ಸ್ಥಳಾಂತರಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಶಿಂಧೆ ಈಗಾಗಲೇ ತಮ್ಮ ಕಾರ್ಪೊರೇಟರ್‌ಗಳನ್ನು ಪಂಚತಾರಾ ಹೋಟೆಲ್‌ಗೆ ಸ್ಥಳಾಂತರಿಸಿದ್ದಾರೆ. ನನಗೆ ದೊರೆತ ಮಾಹಿತಿಯ ಪ್ರಕಾರ, ಬಿಜೆಪಿ ತನ್ನ ಕಾರ್ಪೊರೇಟರ್‌ಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಯೋಜಿಸುತ್ತಿದೆ. ಯಾರು ಯಾರಿಗೆ ಹೆದರುತ್ತಾರೆ? ನಿಮ್ಮದೆ ಸರ್ಕಾರವಿದೆ. ಮುಖ್ಯಮಂತ್ರಿಗಳು ದಾವೋಸ್ (ಸ್ವಿಟ್ಜರ್ಲೆಂಡ್) ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಭೆಯಲ್ಲಿ ಭಾಗವಹಿಸುತ್ತಿರುವಾಗ ಕಾರ್ಪೊರೇಟರ್‌ಗಳನ್ನು ಸ್ಥಳಾಂತರಿಸುತ್ತಿರುವುದು ತಮಾಷೆಯಾಗಿದೆ ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇತಿಹಾಸವನ್ನು ನಿರ್ಲಕ್ಷಿಸಿದಂತೆ ಕಾಣುತ್ತದೆ ಎಂದು ಹೇಳಿದರು, (ಆಗ ಅವಿಭಜಿತ) ಶಿವಸೇನೆ ಕಳೆದ 25 ವರ್ಷಗಳಿಂದ ಬಿಎಂಸಿಯನ್ನು ನಿಯಂತ್ರಿಸುತ್ತಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕಾಂಗ್ರೆಸ್ ಮುಂಬೈನಲ್ಲಿ ಸ್ಥಾಪನೆಯಾಯಿತು ಮತ್ತು ಕ್ವಿಟ್ ಇಂಡಿಯಾ ಚಳುವಳಿಯನ್ನು ಇಲ್ಲಿಂದಲೇ ಪ್ರಾರಂಭಿಸಲಾಯಿತು, ಆದರೆ ಸದ್ಯ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ. ಭಾರತದ ರಾಜಕೀಯ ಇತಿಹಾಸದ ಆ ನಿರ್ಣಾಯಕ ಹಂತಗಳಲ್ಲಿ ಬಿಜೆಪಿ ಅಸ್ತಿತ್ವದಲ್ಲಿಲ್ಲ ಎಂದಿದ್ದಾರೆ.
ಶಿವಸೇನೆ (ಯುಬಿಟಿ) ಬಿಎಂಸಿಯಲ್ಲಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾವತ್, ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಮತ್ತು ಪಕ್ಷವು ಕೇವಲ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಿದೆ ಎಂದು ವಿವರಿಸಿದ್ದಾರೆ. ನಾವು ಎಲ್ಲಾ ಬೆಳವಣಿಗೆಗಳನ್ನು ಆನಂದಿಸುತ್ತಿದ್ದೇವೆ ಎಂದು ಅವರು ವ್ಯಂಗ್ಯವಾಡಿದರು.
ಬಿಎಂಸಿ ಮತ್ತು ಇತರ ನಾಗರಿಕ ಚುನಾವಣೆಗಳಲ್ಲಿ ಪಕ್ಷದ ಸಾಧನೆಯ ನಂತರ ಸ್ವಿಟ್ಜರ್ಲೆಂಡ್‌ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ನೀಡಿದ ಭವ್ಯ ಸ್ವಾಗತವು ಅವರು ಪ್ರಧಾನಿಯಾಗುವ ಹಾದಿಯಲ್ಲಿದ್ದಾರೆ ಎಂಬುದನ್ನು ತೋರಿಸಿದೆ ಎಂದು ರಾವತ್ ವ್ಯಂಗ್ಯವಾಡಿದರು. ಆದಾಗ್ಯೂ, ಒಂದು ದಿನ ಮರಾಠಿ ನಾಯಕರೊಬ್ಬರು ಈ ಹುದ್ದೆಯನ್ನು ಅಲಂಕರಿಸಿದರೆ ಹೆಮ್ಮೆಪಡುತ್ತೇನೆ ಎಂದು ಸೇನಾ (ಯುಬಿಟಿ) ನಾಯಕ ಹೇಳಿದರು. ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಫಡ್ನವೀಸ್ ಮಾತುಕತೆ ನಡೆಸುತ್ತಿದ್ದಾರೆ ಎಂಬ ಊಹಾಪೋಹಗಳನ್ನು ಸಹ ಸಂಜಯ್ ರಾವತ್ ತಳ್ಳಿಹಾಕಿದರು.
Advertisement