

ಚೈಬಾಸಾ: ಜಾರ್ಖಂಡ್‌ನಲ್ಲಿ ಭದ್ರತಾ ಪಡೆಗಳು ಗುರುವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಸರಂದಾ ಅರಣ್ಯ ಪ್ರದೇಶದಲ್ಲಿ ನಡೆಸಿದ ಭೀಕರ ಎನ್‌ಕೌಂಟರ್‌ನಲ್ಲಿ ತಲೆಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿದ್ದ ಟಾಪ್ ಲೀಡರ್ ಪತಿರಾಮ್ ಮಾಂಝಿ ಅಲಿಯಾಸ್ ಅನಲ್ ದಾ ಸೇರಿದಂತೆ 15 ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತರ ಹಲವು ನಕ್ಸಲೀಯರೊಂದಿಗೆ ಅನಲ್ ದಾ ಸಾವನ್ನಪ್ಪಿರುವುದನ್ನು ಜಾರ್ಖಂಡ್ ಪೊಲೀಸ್‌ನ ಐಜಿ ಎಸ್. ಮೈಕೆಲ್‌ರಾಜ್ ಖಚಿತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಭಾರೀ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಯಾರಿದು ಅನಲ್ ದಾ? ಗಿರಿದಿಹ್ ಜಿಲ್ಲೆಯ ಸ್ಥಳೀಯರಾದ ಅನಲ್ ದಾ, ಎರಡು ದಶಕಗಳಿಂದ ನಕ್ಸಲ್ ಚಳುವಳಿಯೊಂದಿಗೆ ಸಂಬಂಧ ಹೊಂದಿದ್ದು, ಉನ್ನತ ನಾಯಕರಾಗಿದ್ದರು. ಗಿರಿದಿಹ್, ಬೊಕಾರೊ, ಹಜಾರಿಬಾಗ್, ಖುಂಟಿ, ಸೆರೈಕೆಲಾ-ಖಾರ್ಸಾವನ್ ಮತ್ತು ಪಶ್ಚಿಮ ಸಿಂಗ್ಭೂಮ್ ಜಿಲ್ಲೆಗಳಲ್ಲಿ ಅವರ ಪ್ರಭಾವ ಇತ್ತೆಂದು ವರದಿಯಾಗಿದೆ.
ಸರಂದಾ ಮತ್ತು ಕೊಲ್ಹಾನ್ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಬಲಪಡಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಭದ್ರತಾ ಪಡೆಗಳ ಮೇಲಿನ ದಾಳಿ, ಐಇಡಿ ಸ್ಫೋಟ, ಸುಲಿಗೆ, ಗುತ್ತಿಗೆದಾರರಿಗೆ ಬೆದರಿಕೆ ಸೇರಿದಂತೆ ಹತ್ತಾರು ಗಂಭೀರ ಕ್ರಿಮಿನಲ್ ಪ್ರಕರಣಗಳು ಆತನ ವಿರುದ್ಧ ದಾಖಲಾಗಿವೆ.
ನಕ್ಸಲೀಯರ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಇಂದು ಮುಂಜಾನೆ ಚೋಟಾನಾಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬ್ಡಿಹ್ ಗ್ರಾಮದ ಬಳಿ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದಾಗ ಎನ್ ಕೌಂಟರ್ ಆರಂಭವಾಗಿದೆ.
ಭದ್ರತಾ ಪಡೆಗಳು ಹಾಗೂ ನಕ್ಸಲೀಯರ ನಡುವೆ ಗಲವು ಗಂಟೆ ನಡೆದ ಗುಂಡಿನ ಚಕಮಕಿ ನಂತರ 15 ಮಂದಿ ನಕ್ಸಲೀಯರು ಸಾವನ್ನಪ್ಪಿರುವುದನ್ನು ಖಚಿತಪಡಿಸಲಾಗಿದೆ. ಶೀಘ್ರದಲ್ಲಿಯೇ ವಿವರವನ್ನು ಹಂಚಿಕೊಳ್ಳಲಾಗುವುದು ಎಂದು ಕೊಲ್ಹಾನ್ ವಿಭಾಗದ ಡಿಐಜಿ ಅನುರಂಜನ್ ಕಿಸ್ಪೊಟ್ಟಾ ತಿಳಿಸಿದ್ದಾರೆ. ಇದು 2026 ರ ಮೊದಲ ಪ್ರಮುಖ ನಕ್ಸಲ್ ವಿರೋಧಿ ಕಾರ್ಯಾಚರಣೆಯಾಗಿದ್ದು, ಭದ್ರತಾ ಪಡೆಗಳಿಗೆ ಗಮನಾರ್ಹ ಯಶಸ್ಸು ಎಂದು ಪರಿಗಣಿಸಲಾಗಿದೆ.
Advertisement