ಗಣರಾಜ್ಯೋತ್ಸವದಲ್ಲಿ CRPF ಪುರುಷರ ತುಕಡಿಗೆ ಮಹಿಳಾ ಅಧಿಕಾರಿಯೇ ನಾಯಕಿ: ಯಾರು ಈ ಸಿಮ್ರಾನ್ ಬಾಲಾ?
ನವದೆಹಲಿ: ಭಾರತದ ನಾರಿಶಕ್ತಿಯ ಬಗ್ಗೆ ಇಡೀ ಜಗತ್ತು ಮೆಚ್ಚುಗೆಯ ಮಾತುಗಳನ್ನಾಡುತ್ತದೆ. ದೇಶದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಆಧುನಿಕ ಮಹಿಳೆ, ರಕ್ಷಣಾ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾಳೆ.
ಈ ಸಂದರ್ಭದಲ್ಲಿ ಮುಂಬರುವ ಜ.26ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಸಿಮ್ರಾನ್ ಬಾಲಾ ಎಂಬ ಅಸಿಸ್ಟಂಟ್ ಕಮಾಂಡೆಂಟ್, ಸಿಆರ್‌ಪಿಎಫ್‌ನ ಪುರುಷ ತುಕಡಿಗೆ ನಾಯಕತ್ವ ವಹಿಸಲಿದ್ದಾರೆ. ಈ ಮಹಿಳಾ ಅಧಿಕಾರಿಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ಬಾರಿಯ ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ನಡೆಯುವ ಪರೇಡ್‌ನಲ್ಲಿ ಕೇಂದ್ರೀಯ ಮೀಸಲು ಪಡೆಯ (ಸಿಆರ್‌ಪಿಎಫ್) ಅಸಿಸ್ಟಂಟ್ ಕಮಾಂಡಂಟ್ ಆಗಿರುವ 26 ವರ್ಷದ ಸಿಮ್ರನ್ ಬಾಲಾ ಅವರು ಪುರುಷ ತುಕಡಿಯನ್ನು ಮುನ್ನಡೆಸಲಿದ್ದಾರೆ.
ಗಣರಾಜ್ಯೋತ್ಸವದ ವಿವಿಧ ತುಕಡಿಗಳಿಗೆ ಮಹಿಳಾ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಧಿಕಾರಿಗಳು ನೇತೃತ್ವ ವಹಿಸಿರುವ ನಿದರ್ಶನಗಳಿವೆ, ಆದರೆ 140 ಕ್ಕೂ ಹೆಚ್ಚು ಪುರುಷ ಸಿಬ್ಬಂದಿಯ ತಂಡಕ್ಕೆ ಮಹಿಳಾ ಅಧಿಕಾರಿಯೊಬ್ಬರು ನೇತೃತ್ವ ವಹಿಸುವುದು ಇದೇ ಮೊದಲಾಗಿದೆ.
ಬಾಲಾ ಅವರು ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯವರು. ದೇಶದ ಅರೆಸೇನಾ ಪಡೆಗೆ ಸೇರಿದ ರಜೌರಿ ಜಿಲ್ಲೆಯ ಮೊದಲ ಮಹಿಳೆ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದಾರೆ. ಯುಪಿಎಸ್‌ಸಿ ನಡೆಸಿದ ಸಿಎಪಿಎಫ್ ಸಹಾಯಕ ಕಮಾಂಡೆಂಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಗುರುಗ್ರಾಮ್‌ನ ಸಿಆರ್‌ಪಿಎಫ್ ಅಕಾಡೆಮಿಯಲ್ಲಿ ಕೌಶಲ ತರಬೇತಿ ಮತ್ತು ಸಾರ್ವಜನಿಕ ಭಾಷಣ ವಿಷಯಗಳಲ್ಲಿ ಅತ್ಯುತ್ತಮ ಅಧಿಕಾರಿ ಪ್ರಶಸ್ತಿಯನ್ನು ಪಡೆದಿದ್ದಾರೆ.
2005ರ ಏಪ್ರಿಲ್‌ನಲ್ಲಿ ಮೊದಲ ಬಾರಿ ಬಾಲಾ ಅವರು ಛತ್ತೀಸಗಢದ ಬಸ್ತ್ರಿಯಾ ಬೆಟಾಲಿಯನ್‌ನಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಕಾರ್ಯನಿರ್ವಹಿಸಿದ್ದರು. ಸುಮಾರು 3.25 ಲಕ್ಷ ಸಿಬ್ಬಂದಿಯನ್ನು ಹೊಂದಿರುವ ಸಿಆರ್‌ಪಿಎಫ್ ದೇಶದ ಅತ್ಯುನ್ನತ ಆಂತರಿಕ ಭದ್ರತಾ ಪಡೆಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ಪಟ್ಟಣವಾದ ನೌಶೇರಾದಲ್ಲಿ ಜನಿಸಿರುವ ಸಿಮ್ರನ್ ಬಾಲಾ, ತಮ್ಮ ಜಿಲ್ಲೆಯಿಂದ ಸಿಆರ್‌ಪಿಎಫ್‌ಗೆ ಅಧಿಕಾರಿಯಾಗಿ ಸೇರ್ಪಡೆಗೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. 2023ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಸಿಮ್ರನ್, 82ನೇ ಅಖಿಲ ಭಾರತ ರ‍್ಯಾಂಕ್ ಗಳಿಸಿದ್ದರು.

