

ಧೆಂಕನಲ್: ಧಾರ್ಮಿಕ ಮತಾಂತರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕ್ರಿಶ್ಚಿಯನ್ ಪಾದ್ರಿಯೊಬ್ಬರಿಗೆ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದು, ಚರಂಡಿ ನೀರು ಕುಡಿಯುವಂತೆ ಒತ್ತಾಯಿಸಿರುವ ಘಟನೆ ನಡೆದಿದೆ.
ಒಡಿಶಾದ ಧೆಂಕನಲ್ ಜಿಲ್ಲೆಯ ಪರ್ಜಾಂಗ್ ಗ್ರಾಮದಲ್ಲಿ ಜನವರಿ 4 ರಂದು ಈ ಘಟನೆ ನಡೆದಿದೆ. ಪಾದ್ರಿ ಬಿಪಿನ್ ಬಿಹಾರಿ ನಾಯ್ಕ್ ತಮ್ಮ ಪತ್ನಿ ಬಂದಾನ ನಾಯ್ಕ್ ಮತ್ತಿತರರೊಂದಿಗೆ ಕುಟುಂಬದ ಸದಸ್ಯರ ಖಾಸಗಿ ಮನೆಯಲ್ಲಿ ಪ್ರಾರ್ಥನಾ ಸಭೆ ನಡೆಸುತ್ತಿದ್ದಾಗ ಬಿದಿರಿನ ದೊಣ್ಣೆಗಳಿಂದ ಮನೆಗೆ ನುಗ್ಗಿದ 15 ರಿಂದ 20 ಜನರ ಗುಂಪೊಂದು ಪತಿ ಮೇಲೆ ಹಲ್ಲೆ ನಡೆಸಿದೆ.
ಅವರನ್ನು ಮನೆಯಿಂದ ಹೊರಗೆ ಎಳೆದೊಯ್ದು, ಮನಬಂದಂತೆ ಥಳಿಸಿದ್ದಾರೆ. ನಿರಂತರವಾಗಿ ಕಪಾಳಮೋಕ್ಷ ಮಾಡಿದ್ದು, ದೊಣ್ಣೆಗಳಿಂದ ಹೊಡೆದಿದ್ದಾರೆ. ಅವರ ಮುಖಕ್ಕೆ ಕೆಂಪು ಸಿಂಧೂರ ಹಾಕಿ, ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಅವಮಾನಿಸಲಾಗಿದೆ ಎಂದು ಅವರ ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.
ಬಜರಂಗದಳದ ಸದಸ್ಯರು ಮತ್ತು ಕೆಲವು ಸ್ಥಳೀಯ ಗ್ರಾಮಸ್ಥರು ಸುಮಾರು ಎರಡು ಗಂಟೆಗಳ ಕಾಲ ಪಾದ್ರಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದು, ಬಳಿಕ ಹನುಮಾನ್ ದೇವಸ್ಥಾನಕ್ಕೆ ಕರೆದೊಯ್ದು ಅಲ್ಲಿ ಅವರ ತಲೆ ಬೋಳಿಸಲಾಗಿದೆ. ದೇವಾಲಯದ ಮುಂದೆ ನಮಸ್ಕರಿಸುವಂತೆ ಒತ್ತಾಯಿಸಿದ್ದು, ಚರಂಡಿ ನೀರು ಮತ್ತು ಹಸುವಿನ ಗಂಜಲ ಕುಡಿಯಲು ಬಲವಂತಪಡಿಸಲಾಗಿದೆ. ಆತನ ಕೈಗಳನ್ನು ದೇವಸ್ಥಾನದಲ್ಲಿ ರಾಡ್‌ನ ಹಿಂದೆ ಕಟ್ಟಲಾಗಿತ್ತು ಎಂದು ದೂರಿನಲ್ಲಿ ಮಹಿಳೆ ವಿವರಿಸಿದ್ದಾರೆ.
ಈ ಸಂಬಂಧ ಬಂದನಾ ನಾಯ್ಕ್ ಪರ್ಜಂಗ್ ಪೊಲೀಸರಿಗೆ ದೂರು ನೀಡಿದ್ದು, ಹಲ್ಲೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
Advertisement