

ಜಾರ್ಖಂಡ್: ರೈಲು ಬರುತ್ತಿದ್ದರೂ ಕ್ರಾಸಿಂಗ್ ಮಾಡಲು ಹೋದ ಟ್ರಕ್ ಗೆ ರೈಲೊಂದು ಡಿಕ್ಕಿ ಹೊಡೆದ ಘಟನೆ ಗುರುವಾರ ಜಾರ್ಖಂಡ್‌ನ ದಿಯೋಘರ್‌ನಲ್ಲಿ ರೈಲ್ವೆ ಕ್ರಾಸಿಂಗ್‌ನಲ್ಲಿ ಸಂಭವಿಸಿದೆ.
ಗೊಂಡಾ-ಅಸನ್ಸೋಲ್ ಎಕ್ಸ್‌ಪ್ರೆಸ್ ಕ್ರಾಸಿಂಗ್ ಮೂಲಕ ಹಾದುಹೋಗುತ್ತಿತ್ತು. ರೈಲು ಬರುವ ಮಾಹಿತಿ ಬಂದ ನಂತರ ರೋಹಿಣಿ-ನವಾಡಿಹ್ ರೈಲ್ವೆ ಗೇಟ್ ಮುಚ್ಚಲಾಗುತ್ತಿತ್ತು. ಆದರೆ, ವಾಹನ ಸವಾರರು ವಾಹನಗಳನ್ನು ನಿಲ್ಲಿಸದೇ ಕ್ರಾಸಿಂಗ್ ಮಾಡಲು ಹೋಗಿದ್ದಾರೆ.
ಇದರಂತೆ ಟ್ರಕ್ ಚಾಲಕ ಕೂಡ ಗಾಡಿ ನುಗ್ಗಿಸಿದ್ದಾನೆ. ಈ ವೇಳೆ ಜಸಿದಿಹ್‌ನಿಂದ ಅಸನ್ಸೋಲ್ ಗೆ ಹೋಗುತ್ತಿದ್ದ ಗೊಂಡಾ-ಅಸನ್ಸೋಲ್ ಪ್ಯಾಸೆಂಜರ್ ರೈಲು ಬಂದಿದೆ. ರೈಲು ಬರುವುದನ್ನು ನೋಡಿ ಟ್ರಕ್ ಚಾಲಕ ಟ್ರಕ್ ಅನ್ನು ಟ್ರ್ಯಾಕ್ ನಿಂದ ಮುಂದೆ ಕೊಂಡೊಯ್ಯಲು ಪ್ರಯತ್ನಿಸಿದ್ದಾನೆ. ಆದರೆ ಅಷ್ಟರಲ್ಲೇ ರೈಲು ಡಿಕ್ಕಿಯಾಗಿದೆ.
ಡಿಕ್ಕಿಯ ತೀವ್ರತೆಗೆ ರೈಲಿನ ಎಂಜಿನ್‌ನ ಮುಂಭಾಗ ಸಂಪೂರ್ಣವಾಗಿ ಹಾನಿಗೊಂಡಿದೆ. ಅಪಘಾತದ ವೇಳೆ ಕ್ರಾಸಿಂಗ್ ಬಳಿ ಇದ್ದ ಎರಡು ಬೈಕ್ ಹಾಗೂ ಟ್ರಕ್ ಜಖಂಗೊಂಡಿವೆ. ಘಟನೆ ವೇಳೆ ಟ್ರಕ್ ಚಾಲಕ ಹಾಗೂ ಬೈಕ್ ಸವಾರರು ವಾಹನ ಬಿಟ್ಟು ಓಡಿದ ಹಿನ್ನೆಲೆಯಲ್ಲಿ ಯಾವುದೇ ಸಾವುಗಳು ಸಂಭವಿಸಿಲ್ಲ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಟ್ರಕ್ ಚಾಲಕ ಹಾಗೂ ಜನರ ಬೇಜವಾಬ್ದಾರಿ ವರ್ತನೆ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.
ಅಪಘಾತದ ನಂತರ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ನಡೆದ ಜಸಿದಿಹ್–ಅಸನ್ಸೋಲ್ ಮುಖ್ಯ ರೈಲು ಮಾರ್ಗದಲ್ಲಿ ಸುಮಾರು ಎರಡು ಗಂಟೆಗಳ ಕಾಲ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಬಳಿಕ ರೈಲ್ವೆ ಸಿಬ್ಬಂದಿ ಹಾಗೂ ಸ್ಥಳೀಯ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಟ್ರಕ್ ಮತ್ತು ಹಳಿಗೆ ಅಡ್ಡಿಯಾದ ಅವಶೇಷಗಳನ್ನು ತೆರವುಗೊಳಿಸಿದರು. ನಂತರ ರೈಲು ಸಂಚಾರವನ್ನು ಪುನರಾರಂಭಿಸಿದರು.
ಈ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ನಡುವೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆ,ಈ ಘಟನೆ ಕುರಿತು ತನಿಖೆ ಆರಂಭಿಸಿದೆ.
Advertisement